ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಅಂಗನವಾಡಿ ನೌಕರರಿಗೆ 15,000 ರೂ. ಸಂಬಳ ನೀಡಬೇಕು. ಹಿಂದಿನ ಸರ್ಕಾರ ಘೋಷಿಸಿದ್ದ 1,000 ರೂ. ಹೆಚ್ಚುವರಿ ಗೌರವಧನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
“ನಿವೃತ್ತಿ ಹೊಂದಿದ ಅಂಗನವಾಡಿ ನೌಕರರಿಗೆ ನಿವೃತ್ತಿ ಪರಿಹಾರ 2 ಲಕ್ಷ ನೀಡಬೇಕು. ನೌಕರರಿಗೆ ಉತ್ತಮ ಗುಣಮಟ್ಟದ ಹೊಸ ಮೊಬೈಲ್ ಹಾಗೂ ಇಂಟರನಟ್ ಒದಗಿಸಬೇಕು. ಚುನಾವಣೆಗಾಗಿ ಕೆಲಸ ಮಾಡಿದ ಬಿಎಲ್‌ಓ ಕಾರ್ಯಕರ್ತೆಯರಿಗೆ ಗೌರವಧನ ನೀಡಬೇಕು. ಐಸಿಡಿಎಸ್ ಕೆಲಸಗಳನ್ನು ಹೊರತು ಪಡಿಸಿ ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳನ್ನು ಅಂಗನವಾಡಿ ನೌಕರರಿಗೆ ನೀಡಬಾರದು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಸಂಘಟನೆಯ ಸಂಚಾಲಕಿ ಭುವನಾ ಬಳ್ಳಾರಿ, “ಸುಮಾರು ದಶಕಗಳಿಂದ ರಾಜ್ಯದ ಬಡಜನರ ನಡುವೆ ಅಂಗನವಾಡಿ ನೌಕರರು ಅಮೂಲ್ಯವಾದ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ನೌಕರರ ಜೀವನಕ್ಕೆ ಪೂರಕವಾದ ಸಂಬಳ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿಲ್ಲ. 1975ರಿಂದ ಕೆಲಸ ಮಾಡುತ್ತಿದ್ದರೂ ಇವರನ್ನು ಖಾಯಂ ನೌಕರರು ಎಂದು ಪರಿಗಣಿಸಿಲ್ಲ. ಅವರನ್ನು ಸ್ಕೀಮ್ ನೌಕರರನ್ನಾಗಿ ಮುಂದುವರಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈಗಲಾದರೂ ಅವರನ್ನು ಡಿ ಗ್ರೂಪ್ ನೌಕರರೆಂದು ಸರ್ಕಾರ ಪರಿಗಣಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸರೋಜಾ ಹುಲಸೇರ, ಕವಿತಾ ಮಸೂತಿ, ರತ್ನಾ ಗಾಣಿಗೇರ, ಶ್ರೀದೇವಿ ತೇಗೂರ, ಚನ್ನಮ್ಮ ತಡಕೋಡ, ಮಂಜುಳಾ ಕಂಬಳಿ, ಶ್ರೀದೇವಿ ಹೂಗಾರ ಮುಂತಾದವರು ಇದ್ದರು.