ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ, ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ರೈತರು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ಹೊಸ ಪರಿವರ್ತಕವನ್ನು ಅಳವಡಿಸಿ ಕೊಡಬೇಕೆಂದು ಒತ್ತಾಯಿಸಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಈ ವರ್ಷ ಸಂಪೂರ್ಣ ಬರಗಾಲದಿಂದಾಗಿ ರೈತ ಕೃಷಿ ಕಾರ್ಮಿಕರು ಕಂಗಾಲಾಗಿದ್ದಾರೆ. ಅಲ್ಪ ಸ್ವಲ್ಪ ಬೆಳೆಯನ್ನು ಬೆಳೆಯುವುದಕ್ಕೆ ಅವರು ಬೋರ್ ವೆಲ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ವಿದ್ಯುತ್ ಸರಿಯಾಗಿ ದೊರೆಯದ ಕಾರಣ ಅವರ ಬೆಳೆ ಹಾಳಾಗುವ ಪರಿಸ್ಥಿತಿಗೆ ಬಂದಿದೆ. ಬರಗಾಲದ ಸಂದರ್ಭದಲ್ಲಿ ರೈತರಿಗೆ ಸಮರ್ಪಕ ವಿದ್ಯುತ್ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಕಲಘಟಗಿ ತಾಲೂಕಿನ ಕುರುವಿನ ಕೊಪ್ಪ ಗ್ರಾಮದ ಮೇಟಿಯವರ 63 ಟಿಸಿಗೆ, 15 ಬೋರ್ ವೆಲ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಏಳು ಬೋರ್ ವೇಲ್‌ಗಳಿಗೆ, ವೋಲ್ಟೇಜ್ ಇಲ್ಲದ ಕಾರಣ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ರೈತರ ಬೆಳೆ ನಷ್ಟವಾಗುತ್ತಿದೆ. ಆದ್ದರಿಂದ ಈ ಕೂಡಲೇ ಹೊಸದಾದ ಟಿಸಿಯನ್ನು ಹಾಕಬೇಕೆಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಮನವಿಯಲ್ಲಿ ಆಗ್ರಹಿಸಿದೆ.
ಮನವಿ ಸ್ವೀಕರಿಸಿದ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ ಎಂ.ಟಿ. ದೊಡ್ಡಮನೆ, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ರೈತರಿಗೆ ಸರ್ಮಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಶರಣು ಗೋನವಾರ, ಯಲ್ಲಪ್ಪ ವಾಲೀಕಾರ, ಬಸು ರೇವಡಿಹಾಳ, ರಾಮಪ್ಪ ಮಣಕವಾಡ, ಸುಭಾಸ್ ರೇವಡಿಹಾಳ, ಅರವಿಂದ ವಂಡಪ್ಪನವರ, ಕಲ್ಲಪ್ಪ ರಾಮನಾಳ ಉಪಸ್ಥಿತರಿದ್ದರು.