ಅಂಜುಮನ್ ಸಂಸ್ಥೆಯಲ್ಲಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಸಂತಸದ ವಿಚಾರ. ಆದರೆ, ಇಲ್ಲಿ ಕಲಿತು ಸಾಧನೆಗೈದ ಮಕ್ಕಳು ಸಂಸ್ಥೆಯ ಹೆಸರು ಹೇಳಲು ಮುಜುಗರಪಡುತ್ತಾರೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ್ ಬೇಸರ ವ್ಯಕ್ತಪಡಿಸಿದರು.
ಧಾರವಾಡ ನಗರದ ಅಂಜುಮನ್ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಯೋಗದಲ್ಲಿ ನಗರದ ವಿದ್ಯಾವರ್ಧಕ ಸಂಘದ ನಾಡೋಜ ಡಾ.ಪಾಟೀಲ ಪುಟಪ್ಪ ಸಭಾಂಗಣದಲ್ಲಿ ನಡೆದ ಕಾಲೇಜಿನ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
“ದುಶ್ಚಟಗಳಿಗೆ ಬಲಿಯಾಗಿ ವಿದ್ಯಾರ್ಥಿಗಳು ಜೀವನ ಹಾಳು ಮಾಡಿಕೊಳ್ಳದೆ, ಉಸಿರು ನಿಂತರೂ, ಹೆಸರು ಅಳಿಯದ ಸಾಧನೆ ಮಾಡುವ ಮೂಲಕ ಕಲಿತ ಸಂಸ್ಥೆ, ಕಲಿಸಿದ ಗುರು ಮತ್ತು ಪಾಲಕರಿಗೆ ಕೀರ್ತಿ ತರಬೇಕು. ವಿದ್ಯಾರ್ಥಿ ಬದುಕಿನಲ್ಲಿ ಆಗುವ ಸೋಲಿನಲ್ಲಿಯೂ ಗೆಲುವು ಸಾಧಿಸುವ ಛಲವಿರಬೇಕು. ಸತತ ಅಧ್ಯಯನ, ನಿರಂತರ ಪರಿಶ್ರಮ ಇದ್ದಾಗ ಸಾಧನೆ ಹಾದಿ ಸುಲಭವಾಗುತ್ತದೆ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“ಉನ್ನತ ಹುದ್ದೆ ಪಡೆದ ಯಾವುದೇ ಧರ್ಮದವರಾಗಿರಲಿ ತಾವು ಕಲಿತ ಸಂಸ್ಥೆಯನ್ನು ಮರೆಯದಿರುವುದೇ ವಿದ್ಯಾರ್ಥಿ ಲಕ್ಷಣವಾಗಬೇಕು ಮತ್ತು ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ನಾಗರಿಕರಾಗುವಂತೆ ಕರೆ ನೀಡಿದರು.
ಕರ್ನಾಟಕ ಉರ್ದು ಅಕ್ಯಾಡೆಮಿ ಅಧ್ಯಕ್ಷ ಮಹ್ಮದ್ ಅಲಿ ಖಾಜಿ ಮಾತನಾಡಿ, “ಉರ್ದು ಜಾಗತಿಕ ಭಾಷೆ. ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾನಿಯಂಥ ನಾಯಕರು ಉರ್ದು ಭಾಷೆ ಅಧ್ಯಯನ ಮಾಡಿದ್ದಾರೆಂದು ಹೆಮ್ಮೆ ವ್ಯಕ್ತಪಡಿಸಿ, ಅಲಿಗಡ ವಿವಿಯಲ್ಲಿ ಉರ್ದು ಭಾಷೆಯಲ್ಲಿಯೇ ರಾಮಾಯಣ, ಮಹಾಭಾರತ ಬೋಧಿಸಲಾಗುತ್ತಿದೆ. ಭವಿಷ್ಯದಲ್ಲಿ ಒಳ್ಳೆಯ ದಿನ ಬರಲಿವೆ. ವಿದ್ಯಾರ್ಥಿಗಳು ಪಾಲಕರ ಪರಿಶ್ರಮ ವ್ಯರ್ಥ ಮಾಡದೆ, ಸಾರ್ಥಕ ಮಾಡಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಎನ್‌ಡಿಎ ಆಡಳಿತದಲ್ಲಿ ವ್ಯಾಪಕ ಗುಂಪು ಹತ್ಯೆ; ಎಸ್‌ಡಿಪಿಐ ಖಂಡನೆ
ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕುಮಾರಿ ಬಿಬಿ ಆಯೇಷಾ ಝಕೀರ್ ಹುಸೇನ್ ರೇಷಮವಾಲೆ, ಕುಮಾರಿ ಸೌಂದರ್ಯ ಚಾವದಲ, ಕುಮಾರಿ ಅಸ್ಮಾ, ಕುಮಾರಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರ ದೀಪಕ್ ದುರ್ಗಣ್ಣವರ, ಕುಮಾರ ಉಸ್ಮಾನ್ ನೈಕರ, ಹಾಗೂ ಕುಮಾರ ದದಾಖಳಂದರ ಜಮಖಂಡಿ, ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಿದರು.
ಅಂಜುಮನ್ ಪದಾಧಿಕಾರಿ ಡಾ. ಎಸ್ ಎಸ್ ಸರಗಿರೋ, ಮಹ್ಮದ್ ಶಫಿ ಕಳ್ಳಿಮನಿ, ಮಹ್ಮದ್ ರಫೀಕ್ ಶಿರಹಟ್ಟಿ, ಯಾಸೀನ್ ಹಾವೇರಿಪೇಟಿ, ಜನಾಬ ಖಲೀಲ್ ದಾಸನಕೊಪ್ಪ, ಪತ್ರಿಕೋದ್ಯಮದ ಮುಖ್ಯಸ್ಥ ಡಾ. ಎಸ್ ಎಸ್ ಅದೋನಿ ಇದ್ದರು.