ಸಂವಿಧಾನದ ಜಾಗೃತಿ ಅಭಿಯಾನವನ್ನು ಅನುಷ್ಠಾನಗೊಳಿಸುವಲ್ಲಿ ಧಾರವಾಡ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಭಾರತದ ಸಂವಿಧಾನವನ್ನು ಅಂಗೀಕರಿಸಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಜಾಥಾವನ್ನು ಗಣರಾಜ್ಯೋತ್ಸವ ದಿನದಂದು ಇಡೀ ರಾಜ್ಯದಲ್ಲಿ ಆರಂಭಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಲಾಗಿತ್ತು. ಈ ಜಾಥಾವು ಜಿಲ್ಲೆಯ 72 ಗ್ರಾಮ ಪಂಚಾಯಿತಿಗಳು ಮತ್ತು 16 ವಾರ್ಡ್‌ಗಳಲ್ಲಿ ಸಂಚರಿಸಿದೆ.
ರಾಜ್ಯದ 31 ಜಿಲ್ಲೆಗಳ ಪೈಕಿ ಧಾರವಾಡ 700ಕ್ಕೆ 600 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಕೋಲಾರ 210 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಬಾಗಲಕೋಟೆ 200, ಬೆಳಗಾವಿ 180 ಹಾಗೂ ಕಲಬುರಗಿ 180 ಅಂಕ ಪಡೆದಿವೆ. ಮಂಡ್ಯ, ಯಾದಗಿರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಶೂನ್ಯ ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿ. ಆರ್. ಅಂಬೇಡ್ಕರ್ ಅವರ 15 ಅಡಿ ಎತ್ತರದ ಭಾವಚಿತ್ರ ಹಾಗೂ ದೊಡ್ಡ ಎಲ್‌ಇಡಿ ಪರದೆ ಹೊತ್ತ ವಾಹನ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಸಂವಿಧಾನದ ಮುನ್ನುಡಿ ಮತ್ತು ಮುಖ್ಯ ಲಕ್ಷಣಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರದೆಯ ಮೇಲೆ ಪ್ರದರ್ಶಿಸಲಾಗುತ್ತಿದೆ.
ಜಾಥಾದಲ್ಲಿ ತಜ್ಞರಿಂದ ಉಪನ್ಯಾಸ, ಕ್ಯಾಂಡಲ್ ಮತ್ತು ಟಾರ್ಚ್ ಲೈಟ್ ಮೆರವಣಿಗೆ, ಸಾಂಸ್ಕೃತಿಕ ತಂಡಗಳಿಂದ ಸಂಗೀತ ಮತ್ತು ನೃತ್ಯದ ಜೊತೆಗೆ ಶಾಲಾ- ಕಾಲೇಜುಗಳಲ್ಲಿ ಸಂವಿಧಾನದ ಕುರಿತು ಸ್ಪರ್ಧೆಗಳು ಮತ್ತು ಸಂವಿಧಾನದ ಮುಖ್ಯಾಂಶಗಳ ಕುರಿತು ಪವರ್ ಪಾಯಿಂಟ್ ಮೂಲಕ ವಿವರಣೆ ನೀಡಲಾಗುವುದು.