ಧಾರವಾಡದಲ್ಲಿ ವಿದ್ಯುತ್ ನಿರಂತರವಾಗಿ ಕೈಕೊಡುತ್ತಿದೆ. ಇದರಿಂದಾಗಿ ನೀರಿದ್ದರೂ ಜಮೀನಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ರೈತರದಾಗಿದ್ದು, ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ನವಲಗುಂದ ತಾಲೂಕಿನ ಸೊಟಕನಾಳ ಗ್ರಾಮದಲ್ಲಿ ಕೆಲ ರೈತರು ತಮ್ಮ ಹೊಲದಲ್ಲಿ ಕೆರೆ ನಿರ್ಮಾಣ ಮಾಡಿ ಕೊಂಡಿದ್ದಾರೆ. ಕೆರೆಯಲ್ಲಿ ನೀರಿದ್ದರೂ, ವಿದ್ಯುತ್ ಕಡಿತದಿಂದ ನೀರು ಹರಿಸಲು ಆಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಬೆಣ್ಣಿಹಳ್ಳದಿಂದ ಪಂಪ್ ಸೆಟ್ ಮೂಲಕ ರೈತರ ನೀರು ಹರಿಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಕೆರೆ ನಿರ್ಮಿಸಿಕೊಂಡಿದ್ದಾರೆ. ಸದ್ಯ ಈರುಳ್ಳಿ ಬೆಳೆ ಕೈಗೆ ಬರುತ್ತಿರುವ ಸಮಯದಲ್ಲಿ ನೀರು ಹರಿಸಲಾಗುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಳೆ ನಾಶವಾಗುವ ಚಿಂತೆಯಲ್ಲಿ ರೈತರು ಕಣ್ಣೀರಿಡು ತ್ತಿದ್ದಾರೆ. ದಿನಕ್ಕೆ ಏಳುಗಂಟೆ ವಿದ್ಯುತ್ ಪೂರೈಸಬೇಕಾಗಿರುವ ಬೆಸ್ಕಾಂ ಕೇವಲ ಮೂರರಿಂದ ನಾಲ್ಕು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದೆ. ಈರುಳ್ಳಿಗೆ ಉತ್ತಮ ಬೆಲೆ ಬಂದಿದೆ, ನೀರು ಹಾಯಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ರೈತರ ಜೊತೆ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ.
ಮಳೆ ಕೈ ಕೊಟ್ಟು ರಾಜ್ಯದಲ್ಲಿ ಬರೆದ ಛಾಯೆ ಆವರಿಸಿದೆ ಈ ಹಿನ್ನೆಲೆ ವಿದ್ಯುತ್ ಉತ್ಪಾದನೆ ಕೂಡ ಕುಂಠಿತವಾಗಿದ್ದು ರೈತರಿಗೆ ವಿದ್ಯುತ್ ಕೊರತೆ ಭಾರಿ ನಷ್ಟವನ್ನು ತಂದಿಟ್ಟಿದೆ. ಕೆಲ ಕಡೆ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದ ಬೆಳೆ ಬೆಳೆಯಲು ಆಗುತ್ತಿಲ್ಲ. ಧಾರವಾಡದಲ್ಲಿ ವಿದ್ಯುತ್ ನಿರಂತರವಾಗಿ ಕೈಕೊಡುತ್ತಿದೆ. ಇದರಿಂದ ನೀರಿದ್ದರೂ ಜಮೀನಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ.