ಬಿತ್ತನೆ ಮಾಡಿರುವ ಬೆಳೆಗೆ ದನಕರುಗಳನ್ನು ಬಿಟ್ಟು ನಾಶ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಯರಿಕೊಪ್ಪ ಗ್ರಾಮದ ರೈತರು ಒತ್ತಾಯಿಸಿದ್ದಾರೆ.
ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಹಸು ಮೇಯಿಸಲು ಬರುವ ಕಿಡಿಗೇಡಿಗಳು ಹಾಗೂ ದನಗಳ ಮಾಲಿಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
“ಮುಂಗಾರು ಮಳೆ ಸಕಾಲಕ್ಕೆ ಬಾರದ ಕಾರಣ ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಪಸ್ವಲ್ಪ ಬಂದ ಮಳೆ ಹಾಗೂ ಬೋರ್‌ವೆಲ್ ನೀರಿನ ಸಹಾಯದಿಂದ ಯರಿಕೊಪ್ಪ ಗ್ರಾಮಸ್ಥರು ತಮ್ಮ ಕೃಷಿ ಭೂಮಿಯಲ್ಲಿ ಮುಂಗಾರು ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ಬೆಳೆಗೆ ಕಿಡಿಗೇಡಿಗಳು ದನಕರುಗಳನ್ನು ಬಿಟ್ಟು ಬೆಳೆನಾಶ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮನರೇಗಾ ಯೋಜನೆಯ ಸಮಸ್ಯೆ ಬಗೆಹರಿಸುವಂತೆ ಒತ್ತಾಯ
“ಬೆಳೆ ಮೊಳಕೆ ಒಡೆದು ಮೇಲೇಳುತ್ತಿರುವ ಸಂದರ್ಭದಲ್ಲಿ ಗ್ರಾಮದ ಹತ್ತಿರದಲ್ಲಿರುವ ತಡಸಿನಕೊಪ್ಪದ ದನಕರಗಳು ನಮ್ಮ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಯನ್ನು ಹಾನಿ ಮಾಡುತ್ತಿವೆ. ಹಾಗಾಗಿ ಅಕ್ಕಪಕ್ಕಾ ಗ್ರಾಮದ ಜಾನುವಾರು ಸಾಕಾಣಿಕೆದಾರರಿಗೆ ತಿಳಿಹೇಳಿ ನಮ್ಮ ಬೆಳೆ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
“ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ, ನಿರ್ಲಕ್ಷ್ಯ ತೋರಿದರೆ ಮುಂದೆ ಆಗುವ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಗಾರರು” ಎಂದು ಎಚ್ಚರಿಕೆ ನೀಡಿದರು.