ಜನಪ್ರಿಯ ಹಿಂದೂಸ್ಥಾನಿ ಸಂಗೀತಗಾರ್ತಿ ಗಂಗೂಬಾಯಿ ಹಾನಗಲ್ ಎಂದೇ ಖ್ಯಾತಿಯಾದ, ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡು ಸದಸ್ಯೆಯಾಗಿದ್ದ, ಗಂಗೂಬಾಯಿಯವರು ವಾಸವಿದ್ದ ಮನೆ ಈಗ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ಸಂಗೀತ ವಿದ್ಯಾಲಯವನ್ನು ಸ್ಥಾಪನೆ ಮಾಡುವಂಥ ಅಭಿಲಾಷೆಯನ್ನು ಹೊಂದಿದ್ದ ಗಂಗೂಬಾಯಿ ಹಾನಗಲ್ ಅವರ ಧಾರವಾಡದ ಹೊಸಯಲ್ಲಾಪುರದಲ್ಲಿರುವ ಮನೆ ಇವತ್ತು ಪಾಳುಬಿದ್ದು, ಅನಾಥವಾಗಿ ಕಾಣಿಸಿಕೊಳ್ಳುತ್ತಿದೆ. ಪಾಳುಬಿದ್ದ ಮನೆಯಲ್ಲಿ ಗಿಡ, ಕಸ ಕಡ್ಡಿ ಬೆಳೆದು ನಿಂತಿದ್ದು, ಯಾರೂ ಕಾಲಿಡದಂಥ ವಾತಾವರಣ ಸೃಷ್ಠಿಯಾಗಿದೆ.
ಕಳೆದ ಎಂಟತ್ತು ವರ್ಷಗಳ ಹಿಂದೆ ಅವರು ವಾಸವಿದ್ದ ಮನೆಯನ್ನು ಜೀರ್ಣೋದ್ಧಾರಗೊಳಿಸಿ ಅದನ್ನು ಕಾವಲಿಗೂ ಒಬ್ಬರನ್ನು ನೇಮಿಸಿದ್ದರು. ಆದರೆ, ಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾಗಿ; ಮನೆಯೂ ಸಂಪೂರ್ಣ ಬಿದ್ದು ಹೋಗಿದ್ದು, ಮನೆಯ ಒಳಗಡೆ ಅರಳಿ ಮರಗಳು ಬೆಳೆದು ನಿಂತಿವೆ. ಅವರ ಕುಟುಂಬಸ್ಥರು ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಆಗಾಗ ಇದು ಖ್ಯಾತ ಸಂಗೀತಗಾರ್ತಿ ಗಂಗೂಬಾಯಿ ಹಾನಗಲ್ ಅವರ ಮನೆಯೆಂದು ದೂರ-ದೂರದಿಂದ ಪ್ರವಾಸಿಗರು ಬಂದು ನೋಡಲು, ಬಿದ್ದು ಹಾಳಾಗಿರುವುದನ್ನು ಕಂಡು ಪೋಟೋ ಕ್ಲಿಕ್ ಮಾಡಿಕೊಂಡು ಸುಮ್ಮನೆ ಹೋಗುವುದು ಸಾಮಾನ್ಯವಾಗಿದೆ. ಕಳೆದ ಎಂಟತ್ತು ವರ್ಷಗಳಿಂದ ಗಂಗೂಬಾಯಿಯವರ ಮನೆ ಬಿದ್ದುಹೋಗಿದ್ದು, ಈ ಕುರಿತು ಜೀರ್ಣೋದ್ಧಾರ ಮಾಡಲು ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅದರ ಒಳಮರ್ಮ ಏನೆಂದೂ ಯಾರಿಗೂ ತಿಳಿಯುತ್ತಿಲ್ಲ.
“ಸರ್ಕಾರದಿಂದ ಸ್ಮರಣಾಚರಣೆ ಮಾಡುತ್ತಿದ್ದರು. ಈಗ ಅನ್ನೂ ಮಾಡುವುದಿಲ್ಲ. ಒಂದುವೇಳೆ ಬಿದ್ದ ಮನೆಯನ್ನು ಮರುನಿರ್ಮಿಸಿ, ಅಲ್ಲಿ ಗ್ರಂಥಾಲಯ, ಸ್ಮಾರಕ ಇತ್ಯಾದಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಾಟು ಮಾಡಿದರೆ; ನಮ್ಮ ಧಾರವಾಡಕ್ಕೂ ಇನ್ನೊಂದು ಹೆಮ್ಮೆ. ಮತ್ತು ಪ್ರವಾಸಿಗರು ಬಂದು ಹೋಗುವುದರಿಂದ ನಮಗೂ ದುಡಿಮೆ ಆಗುತ್ತದೆಂದು ಆಟೋ ಚಾಲಕರು ವಿಚಾರ ಹಂಚಿಕೊಳ್ಳುತ್ತಾರೆ. ಹೊಸಯಲ್ಲಾಪುರದ ಮುಖ್ಯ ರಸ್ತೆಯಲ್ಲಿರುವ ಗಂಗೂಬಾಯಿಯವರ ಮನೆಯನ್ನು ನೋಡಲು ಅನೇಕರು ಬಂದು, ಇದನ್ನೂ ಯಾರೂ ಗಮನಿಸುತ್ತಿಲ್ಲವೆ ಎಂದು ನಮ್ಮನ್ನೇ ಪ್ರಶ್ನಿಸಿ ಹೋಗುತ್ತಾರೆ. ಒಂದುವೇಳೆ ಮ್ಯೂಸಿಯಂ ಮಾಡಿದರೆ ಅಲ್ಲಿ ಕಾಯಲು ಒಬ್ಬರಿಗೆ ಇಡಬೇಕಾಗುತ್ತದೆ. ಅದರಿಂದ ಒಬ್ಬ ವ್ಯಕ್ತಿಗೆ ಕೆಲಸ ನೀಡಿದಂತಾಗುತ್ತದೆ. ಹೀಗೆ ಎಲ್ಲರೂ ಬದುಕುತ್ತಾರೆ. ಜತೆಗೆ ಮುಂದಿನ ಪೀಳಿಗೆಯೂ ಗಂಗೂಬಾಯಿಯವರ ಸಂಗೀತ ಸಾಧನೆಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ” ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಾರೆ.

ಗಂಗೂಬಾಯಿ ಹಾನಗಲ್ ಹುಟ್ಟಿದ್ದು, ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ. ಬೆಳೆದದ್ದು ಧಾರವಾಡ. ನರಗುಂದದಲ್ಲಿ ಇವರ ಅಜ್ಜಿಯ ಅಜ್ಜ ನರಗುಂದದ ಬಾಬಾಸಾಹೇಬರು ಬ್ರಿಟಿಷರ ವಿರುದ್ಧ ಸಮರ ಸಾರಿದದ್ದಾಗ, ಗಂಗೂಬಾಯಿಯವರ ಮುತ್ತಜ್ಜಿ ಬ್ರಿಟಿಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಹಾನಗಲ್‌ಗೆ ಓಡಿ ಬಂದು ನೆಲೆಸಿದರಂತೆ. ಅಲ್ಲಿಂದ ಇವರ ಮನೆ ಹೆಸರು ಹಾನಗಲ್ ಎಂದಾಯ್ತು ಎಂದು ತಿಳಿದುಬರುತ್ತದೆ. ಗಂಗೂಬಾಯಿ ತಮ್ಮ ಬದುಕಿನಲ್ಲಿ ಎರಡುಬಾರಿ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಮೂಲ ಹೆಸರು, ‘ಗಾಂಧಾರಿ ಹಾನಗಲ್’ ಎಂದಿತ್ತು. ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, ಅವರ ಪರಿಚಯ ‘ಗಂಗೂಬಾಯಿ ಹುಬ್ಳೀಕರ’ ಎಂದಾಯಿತು. ಹಾನಗಲ್ ಅವರ ಪೂರ್ವಜರ ಊರು. ಅದು ಶಾಸ್ವತವಾಗಿ ಉಳಿಯಲಿ ಎಂಬ ಉದ್ದೇಶದಿಂದ 1936ರಲ್ಲಿ ‘ಗಂಗೂಬಾಯಿ ಹಾನಗಲ್’ ಎಂದು ಘೋಷಣೆಯಾಗುತ್ತದೆ.
1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿ ಹಾನಗಲ್ ಮಹಾತ್ಮ ಗಾಂಧೀಜಿ ಎದುರಿಗೆ ʼಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆʼ ಎನ್ನುವ ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿ ಮತ್ತ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಗಂಗೂಬಾಯಿಯವರ ತಾಯಿ ಸ್ವತಃ ಕರ್ನಾಟಕ ಸಂಗೀತದ ಗಾಯಕಿಯಾಗಿದ್ದರು. ಅವರ ಕರ್ನಾಟಕ ಸಂಗೀತ ಪದ್ಧತಿ ಮಗಳ ಮೇಲೆ ವಿಪರೀತ ಪರಿಣಾಮ ಬೀರಬಾರದೆನ್ನುವ ಉದ್ದೇಶದಿಂದ ತಾಯಿ ಅಂಬಾಬಾಯಿ ಹಾಡುವುದನ್ನೇ ನಿಲ್ಲಿಸಿಬಿಟ್ಟರು! ಇಂತಹ ತ್ಯಾಗಮಯಿ ತಾಯಿ 1932ರೊಳಗ ತೀರಿಕೊಂಡ ನಂತರ ಗಂಗೂಬಾಯಿ ಮುಂಬಯಿಗೆ ಹೋದರು. ಅಲ್ಲಿಂದ ಮತ್ತೆ ನಿರಂತರ ಸಂಗೀತದ ಸಾಧನೆಯಿಂದ ಮುಂಬೈ ಆಕಾಶವಾಣಿಯಲ್ಲಿ ಹಾಡುವುದಕ್ಕೆ ಶುರುಮಾಡಿದರು. ಅವರ ಹಾಡುಗಾರಿಕೆಯನ್ನು ಆ ಕಾಲದ ಸಂಗೀತಕಾರರಾದ ಬಡೆ ಗುಲಾಮ ಅಲಿ ಖಾನ, ಉಸ್ತಾದ ಫಯಾಜ ಖಾನ, ಪಂಡಿತ ಓಂಕಾರನಾಥ, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮೊದಲಾದವರು ಮೆಚ್ಚಿಕೊಂಡಿದ್ದರು.

ಗಂಗೂಬಾಯಿಯವರು 1958ರಲ್ಲಿ ನೇಪಾಳ, 1961ರಲ್ಲಿ ಪಾಕಿಸ್ತಾನ, 1979ರಲ್ಲಿ ಅಮೇರಿಕಾ ಮತ್ತು ಕೆನಡಾ ಹಾಗೂ 1984ರಲ್ಲಿ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೂ ಹೋಗಿ ಭಾರತೀಯ ಸಂಗೀತದ ಸವಿಯನ್ನು ಅಲ್ಲೆಲ್ಲ ಉಣಬಡಿಸುತ್ತಾರೆ. ಅಲ್ಲದೆ ಅವರ ಗುರುಗಳಾದ ಸವಾಯಿ ಗಂಧರ್ವರ ಹೆಸರಿನಲ್ಲಿ ಜಿಲ್ಲೆಯ ಕುಂದಗೋಳದಲ್ಲಿ ವರ್ಷಕ್ಕೆ ಒಂದುಸಲ ʼಸಂಗೀತೋತ್ಸವʼ ನಡೆಸುತ್ತಿದ್ದರು. ಅವರ ಸಂಗೀತದ ಸಾಧನೆಗೆ ಅನೇಕ ಪ್ರಶಸ್ತಿಗಳು ಧಾವಿಸಿ ಬರುತ್ತವೆ. ಗೌರವ ಡಾಕ್ಟರೇಟ್ ಪದವಿಗಳು ಮತ್ತು ಬಿರುದುಗಳೂ ದೊರಕಿದವು. ಅದಷ್ಟೇ ಅಲ್ಲದೆ ಗಂಗೂಬಾಯಿಯವರು ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಸದಸ್ಯೆ ಕೂಡಾ ಆಗಿದ್ದರು. ಗಂಗೂಬಾಯಿ ಧಾರವಾಡದಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ವರಕವಿ ದ ರಾ ಬೇಂದ್ರೆ ಇವರ ಗುರುಗಳಾಗಿದ್ದರು.
2009, ಜುಲೈ 21ರ ಮಂಗಳವಾರ ಬೆಳಿಗ್ಗೆ ತಮ್ಮ 97ನೇ ವಯಸ್ಸಿನೊಳಗೆ ಹೃದಯ ಸಂಬಂಧಿ ಉಸಿರಾಟದ ಖಾಯಿಲೆಯಿಂದ ದೀರ್ಘಕಾಲದಿಂದ ಬಳಲುತ್ತಿದ್ದ ಅವರು ಹುಬ್ಬಳ್ಳಿಯ ‘ಲೈಫ್ ಲೈನ್ ಆಸ್ಪತ್ರೆ’ಯೊಳಗ ನಿಧನವಾಗುತ್ತಾರೆ. ಅವರ ಮರಣದನಂತರ ತಮ್ಮೆರಡು ಕಣ್ಣುಗಳನ್ನು ದಾನ ಮಾಡಿದ್ದರು. ಗಂಗೂಬಾಯಿ ವಿಶೇಷವಾಗಿ ಸಂಗೀತ ವಿದ್ಯಾಲಯವನ್ನು ಸ್ಥಾಪನೆ ಮಾಡುವಂತ ಅಭಿಲಾಷೆ ಹೊಂದಿದ್ದರು. ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಶಾಸ್ತ್ರೀಯ ಸಂಗೀತದ ಪಾಠಕ್ರಮವನ್ನು ಆಳವಡಿಸಿ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವ ಆಸೆಯಿಂದ ಸಮಾರಂಭಗಳಲ್ಲಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತ, ತಮ್ಮ ನಿಲವನ್ನು ಪ್ರತಿಪಾದಿಸುತ್ತಿದ್ದರು.
ಇದನ್ನೂ ಓದಿದ್ದೀರಾ? ಅರಸೀಕೆರೆ | ಎತ್ತಿನಹೊಳೆ ನೀರಿನ ಕೊರಗು ನೀಗಿಸಿ: ಕೆ ಎಂ ಶಿವಲಿಂಗೇಗೌಡ ಸರ್ಕಾರಕ್ಕೆ ಮನವಿ
ಭಾರತೀಕಂಠ, ಸಂಗೀತ ಕಲಾರತ್ನ ಎಂಬಿತ್ಯಾದಿ ಬಿರುದು ಪಡೆದ ಗಂಗೂಬಾಯಿ ಹಾನಗಲ್ ಅವರು ಜೀವಿಸಿದ್ದ ಮನೆ ಇವತ್ತು ಅನಾಥವಾಗಿ ಬಿದ್ದಿದ್ದು, ಅದನ್ನು ಯಾರೂ ನೋಡುವವರೂ ಇಲ್ಲ. ಅನೇಕ ಅಧಿಕಾರಿಗಳು, ಪ್ರವಾಸಿಗರು, ಮಹಾನಗರ ಪಾಲಿಕಯವರು ಬಂದು ನೋಡಿಕೊಂಡು ಹೋಗುತ್ತಾರೆ. ಆದರೆ ಯಾವುದೇ ಪ್ರಯೋಜನವೂ ಆಗಿಲ್ಲ. ಪಾಳುಬಿದ್ದ ಗಂಗೂಬಾಯಿಯವರ ಮನೆಯನ್ನು ಜೀರ್ಣೋದ್ಧಾರಗೊಳಿಸಿ, ಗ್ರಂಥಾಲಯ ಕಟ್ಟಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದು, ಇಂತಹ ಸಂಗೀತಕಾರರು ನಮ್ಮ ನಡುವೆ ಬದುಕಿ ಹೋಗಿದ್ದಾರೆಂದು ಹೇಳಿಕೊಳ್ಳಲು ನಮಗೂ ಒಂದು ಹೆಮ್ಮೆ ಇರುತ್ತದೆ ಎಂಬುದು ಸ್ಥಳೀಯರ ಅಭಿಲಾಷೆಯಾಗಿದೆ.