ಸರಕಾರಿ ನೌಕರ ಸೇವೆಯಲ್ಲಿದ್ದಾಗ ನೀತಿ, ತತ್ತ್ವ, ಸಿದ್ದಾಂತಗಳಿಗೆ ಬದ್ಧನಾಗಿ ವೃತ್ತಿ ನಿರ್ವಹಿಸಬೇಕು. ಅದರಂತೆ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಅವರು ಬಡತನದಲ್ಲಿ ಹುಟ್ಟಿ ಅರಳಿದ ಮಲ್ಲಿಗೆ ಹೂವು. ಜೀವನದಲ್ಲಿ ದೊಡ್ಡ ಗುರಿಯಿಂದ ಸಾಧನೆ ಮಾಡಿದ್ದಾರೆ. ಅವರ ವ್ಯಕ್ತಿತ್ವ ಇತರರಿಗೆ ಮಾದರಿ ಎಂದು ಶಿರಹಟ್ಟಿ ಮಠದ ಫಕ್ಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ಆಲೂರು ವೆಂಕಟರಾವ ಸಭಾಭವನದಲ್ಲಿ ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ನಿವೃತ್ತಿ ಪ್ರಯುಕ್ತ ಜರುಗಿದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ, ಮಾತನಾಡಿ, ಸರಕಾರಿ ನೌಕರ ಸೇವೆಯಲ್ಲಿದ್ದಾಗ ನೀತಿ, ತತ್ತ್ವ, ಸಿದ್ದಾಂತಗಳಿಗೆ ಬದ್ಧನಾಗಿ ವೃತ್ತಿ ನಿರ್ವಹಿಸಬೇಕು. ನಿವೃತ್ತಿ ನಂತರ ತನ್ನ ಅನುಭವದ ಆಧಾರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಸಾರ್ಥಕತೆ, ಸಮಾದಾನ ಸಿಗುತ್ತದೆ ಮತ್ತು ಅವರ ಪರೊಪಕಾರಿ, ಜೀವಪರ ಚಿಂತನೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಮುರಘಾಮಠದ ಮಲ್ಲಿಕಾರ್ಜುನ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಪ್ರತಿ ಮನುಷ್ಯ ಭೂಮಿಯ ಮೇಲೆ ನೂರು ವರ್ಷ ಬದುಕುತ್ತಾನೆ. ಹಾಗೆ ಹದ್ದು ಕೂಡ ನೂರು ವರ್ಷ ಬದುಕುತ್ತದೆ. ಆದರೆ ಹದ್ದಿನ ಹಾಗೆ ಬದುಕುವುದು ಬದುಕಲ್ಲ. ಆತ್ಮ ಸಾಕ್ಷಿಯಾಗಿ ಮತ್ತು ಮನ ಸಾಕ್ಷಿಯಾಗಿ ಬದುಕಬೇಕು ಎಂಬುವುದನ್ನು ಬಸವಣ್ಣವರ ತಮ್ಮ ವಚನದಲ್ಲಿ ಹೇಳಿದ್ದಾರೆ ಎಂದರು.
ಅಭಿನಂದನೆ ಸ್ವಿಕರಿಸಿದ ಪ್ರಧಾನ ಜಿಲ್ಲಾ ನ್ಯಾಯಾದೀಶ ಎಸ್.ಬಿ.ವಸ್ತ್ರಮಠ ಮಾತನಾಡಿ, ಜೀವನದಲ್ಲಿ ನಾನು ಕಷ್ಟ ಮತ್ತು ಸುಖ ಎರಡನ್ನೂ ಕಂಡಿದ್ದೇನೆ. ಒಂದು ರೂಪಾಯಿಯಲ್ಲಿಯೂ ಚಹಾ ಕುಡಿದಿದ್ದೇನೆ. ಅದೇ ರೀತಿಯಾಗಿ 500 ರೂಪಾಯಿ ಕೊಟ್ಟು ರೇಸಿಡೆನ್ಸಿ ಹೋಟೆಲ್‍ನಲ್ಲಿಯೂ ಸಹ ಚಹಾ ಕುಡಿದಿದ್ದೇನೆ. ನಾವು ಒಂದರಿಂದ ಎರಡು ಲಕ್ಷದವರೆಗೆ ಸಂಬಳ ಪಡೆದುಕೊಂಡರೂ ನೆಮ್ಮದಿಯ, ಖುಷಿಯ ಜೀವನ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲು ಒಂದು ರೂಪಾಯಿ ಇದ್ದರು ಜೀವನದಲ್ಲಿ ಸಂತಸದಿಂದ ಪ್ರೀತಿಯಿಂದ ಇರುತ್ತಿದ್ದೆವು. ಸಣ್ಣ ವಯಸ್ಸಿನಲ್ಲಿ ಅಪ್ಪ ಕೊಟ್ಟ ಒಂದು ರೂಪಾಯಿ ಮನಸ್ಸಿಗೆ ಆನಂದ ತರುತಿತ್ತು. ಮೂರರಿಂದ ನಾಲ್ಕು ದಿನಗಳವರೆಗೆ ಆ ಒಂದು ರೂಪಾಯಿ ನೋಡಿಕೊಂಡು ಸಂತಸದಿಂದ ಆಡಿ, ನಲಿದಿದ್ದೆವೆ. ಅದೇ ಒಂದು ರೂಪಾಯಿ ಕಳೆದುಕೊಂಡಾಗ ಮೂರು ದಿನ ಊಟ ಬಿಟ್ಟು, ಹುಡುಕಿದ್ದೂ ಇದೆ. ಆದರೆ ನಾವು ಈ ದಿನಗಳಲ್ಲಿ ಒಂದರಿಂದ ಎರಡು ಲಕ್ಷದವರೆಗೆ ಸಂಬಳವನ್ನು ಪಡೆದರೂ, ಆ ಖುಷಿ ನೆಮ್ಮದಿ ಸಿಗುವುದಿಲ್ಲ. ಹಾಗೆ ಜೀವನವೆಂಬುವುದು ನಿಂತ ನೀರಾಗಬಾರದು. ಮುಂದಕ್ಕೆ ಸಾಗಿ ನದಿಗಳ ಮೂಲಕ ಸಾಗರವನ್ನು ಸೇರುವ ಮಾರ್ಗವನ್ನು ಕಂಡುಕೊಂಡು ಮುಂದೆ ಸಾಗಿ ಸಾಧನೆ ಮಾಡುವ ಗುರಿಯನ್ನು ಹೊಂದಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಧಾರವಾಡ | ಬಾಬು ಜಗಜೀವನ ರಾಂ, ನಿರಂತರ ದೇಶದ ಅಭಿವೃದ್ಧಿಪರ ಇದ್ದವರು: ಶಾಸಕ ಎನ್.ಎಚ್.ಕೋನರಡ್ಡಿ
ಕಾರ್ಯಕ್ರಮದಲ್ಲಿ ಕೃಷಿ ಮಾರಾಟ ಇಲಾಖೆಯ ರಾಜ್ಯ ನಿರ್ದೇಶಕ ಶಿವಾನಂದ ಕಾಪಶಿ ಮತ್ತು ಧಾರವಾಡದ ಹಿರಿಯ ನ್ಯಾಯವಾದಿ ಎ.ಸಿ.ಚಾಕಲಬ್ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೀಪಾ ಪತ್ತಾರ ಪ್ರಾರ್ಥಿಸಿದರು. ಪ್ರೊ. ಸಿದ್ದಯ್ಯ ವಸ್ತ್ರಮಠ ಸ್ವಾಗತಿಸಿದರು. ವಿನಾಯಕ ವಸ್ತ್ರಮಠ ವಂದಿಸಿದರು. ಡಾ. ಜಗದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ.ವಸ್ತ್ರಮಠ ಗೆಳೆಯರ ಬಳಗ ಹಾಗೂ ಕುಟುಂಬದ ಸದಸ್ಯರು, ಬಂಧುಗಳು, ಗುರು ಹಿರಿಯರು, ಅವರ ಅಭಿಮಾನಿಗಳು ಭಾಗವಹಿಸಿದ್ದರು.