ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣವು ಅತ್ಯಂತ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿದ್ದು, ಇತ್ತ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ಕಛೇರಿಗಳ ಸಂಕೀರ್ಣ ಕಟ್ಟಡವು ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಮುಖ್ಯವಾಗಿ ಈ ಕಟ್ಟಡವು ಕೊಳಚೆ ತುಂಬಿದ ನೀರಿನ ಗುಂಡಿಯಲ್ಲಿ ನಿಂತಿರುವುದನ್ನು ಪಟ್ಟಣ ಪಂಚಾಯತ್ ಮತ್ತು ಅಧಿಕಾರಿ ವರ್ಗ ಹಾಗೂ ಶಾಸಕರು ಎಚ್ಚೆತ್ತು ಇತ್ತ ನೋಡಬೇಕಿದೆ.
ಕುಂದಗೋಳ ಪಟ್ಟಣದಲ್ಲಿರುವ ವಿವಿಧ ಇಲಾಖೆಗಳ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡವು ಕೊಳಚೆ ನೀರಿನ ಗುಂಡಿಯಲ್ಲಿ ತೇಲಾಡುತ್ತಿದ್ದು, ಆ ಕಟ್ಟಡದಲ್ಲಿಯೇ ಮಕ್ಕಳ ಅಭಿವೃದ್ಧಿ ಇಲಾಖೆ, ಬಿಸಿಎಮ್, ಕಾರ್ಮಿಕ ಇಲಾಖೆ, ಸರ್ಕಾರಿ ನೌಕರರ ಸಂಘ, ಶಾಸಕರ ಕಚೇರಿ ಹೀಗೆ ವಿವಿಧ ಇಲಾಖೆಗಳ ಕಛೇರಿಗಳಿವೆ. ಪದೆ ಪದೆ ಶಾಸಕರು ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಆದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ಒಳಚರಂಡಿಯ ಕೊಳಚೆ ನೀರು ಬಂದು ಈ ಕಟ್ಟಡದಲ್ಲಿ ಸೇರುವುದನ್ನು ಸೇರಿಕೊಳ್ಳುವುದನ್ನು ಐದಾರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುತ್ತಾ ಇರುತ್ತಾರೆ. ಆದರೆ ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆಯು ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಈ ಕಟ್ಟಡದ ಸುತ್ತಮುತ್ತಲು ದನ ಮೇಯಿಸಲು ಬರುವ ವ್ಯಕ್ತಿಯೊಬ್ಬರು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ನಾನು ಇಲ್ಲಿಯೇ ದಯ ಮೇಯಿಸುತ್ತ ಬಂದಿದ್ದೇನೆ. ನಾಲ್ಕೈದು ವರ್ಷಗಳಿಂದ ಈ ಕಟ್ಟಡವನ್ನು ನೋಡುತ್ತಿದ್ದೇನೆ. ಇದಕ್ಕೂ ಮೊದಲು ಇಲ್ಲಿ ಕೆರೆ ಒಂದಿತ್ತು. ಈ ಕಟ್ಟಡವನ್ನು ಕಟ್ಟಿಸಿದ ಸುಮಾರು ವರ್ಷಗಳು ಉದ್ಘಾಟನೆಯಾಗದೆ ಹಾಗೆ ಬಿಟ್ಟಿದ್ದರು. ಇದೀಗ ಉದ್ಘಾಟನೆಯಾಗಿ ಕಚೇರಿಗಳು ನಡೆಯುತ್ತಿದ್ದರೂ ಅದೇ ಕೊಳಚೆ ಗುಂಡಿಯಲ್ಲಿಯೇ ಕಟ್ಟಡ ಇದ್ದರೂ, ಅಧಿಕಾರಿಗಳು ಸಹಿತ ಸುಮ್ಮನೆ ಬಂದು ಕಾರ್ಯನಿರ್ವಹಿಸಿ ತಮ್ಮ ಪಾಡಿಗೆ ತಾವು ಹೋಗುವುದು ರೂಢಿಯಾಗಿಬಿಟ್ಟಿದೆ. ಈ ಕಚೇರಿಗಳ ಸಂಕೀರ್ಣ ಕಟ್ಟಡ ಕಟ್ಟಿದ ನಂತರ ಹಿಂದೆ ಇದ್ದ ಎಂಟತ್ತು ಮನೆಗಳಿಗೆ ರಸ್ತೆ ಇಲ್ಲದಂತಾಗಿದೆ. ಈ ಕಟ್ಟಡದಲ್ಲಿ ತುಂಬಿಕೊಂಡ ಕೊಳಚೆ ನೀರಿನಿಂದ ಬಹಳಷ್ಟು ಸಮಸ್ಯೆ ಉಂಟಾಗುತ್ತಿದ್ದು, ಚಿಕ್ಕ ಮಕ್ಕಳು ಆಟವಾಡಲು ಬಂದಾಗ ಕಾಲು ಜಾರಿ ಬಿದ್ದು ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಾರೆ.

ಈ ಕಟ್ಟಡದಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ಸುತ್ತಿರುವ ವ್ಯಕ್ತಿ ಮಾತನಾಡಿ, ನಾವು ಆಗಾಗ ಸ್ವಚ್ಛಗೊಳಿಸುತ್ತಾ ಇರುತ್ತೇವೆ. ಈ ಕಟ್ಟಡ ಕಟ್ಟುವಾಗಲೇ ಸರಿಯಾಗಿ ಯೋಜನೆಯ ಹಾಕಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ಎಷ್ಟೋ ಸಲ ಈ ಕಟ್ಟಡದ ಕೆಳ ಮಹಡಿಯಿಂದ ನೀರು ಹೊರ ತೆಗೆದರು ಕೊಳಚೆ ನೀರು ಹೊರ ತೆಗೆದರೂ ಮತ್ತೆ ಮತ್ತೆ ಕೊಳಚೆ ನೀರು ಬಂದು ಸೇರಿಕೊಳ್ಳುತ್ತದೆ. ಈ ಕೊಳಚೆ ನೀರು ಸರಿ ಸುಮಾರು ಎರಡು ಆಳಿನಷ್ಟು ಆಳವಾಗಿ ನಿಂತುಕೊಂಡಿದೆ. ಈ ಸಮಸ್ಯೆಯನ್ನು ಪರಿಹರಿಸಿರಿ, ಬಗೆಹರಿಸಿರಿ ಎಂದು ಸ್ವತಹ ನಾನು ಕೂಡ ಶಾಸಕರ ಗಮನಕ್ಕೆ, ಪಂಚಾಯಿತಿಗೂ ಕೂಡ ಹೇಳಿದ್ದು ಉಂಟು ಆದರೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡ ಕಟ್ಟಿದ್ದು ಸರಿ. ಆದರೂ ಕಟ್ಟಡ ಕಟ್ಟುವುದಕ್ಕಿಂತ ಮೊದಲು ಸರಿಯಾಗಿ ಯೋಜನೆಯನ್ನು ಹಾಕಬೇಕಿತ್ತು ಮತ್ತು ಈಗಲಾದರೂ ಈ ಕೊಳಚೆ ನೀರು ಬರದ ಹಾಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಬೇಸಿಗೆಗಾಲದಲ್ಲಿಯೇ ಇಷ್ಟೊಂದು ಕೊಳಚೆ ನೀರು ಬಂದು ಸೇರುವಾಗ; ಇನ್ನು ಮಳೆಗಾಲದಲ್ಲಿ ಅಂತೂ ಈ ಕಟ್ಟಡದ ಗತಿ ಮುಗಿದೇ ಹೋಗುತ್ತದೆ. ಎಲ್ಲ ಕಾಲದಲ್ಲಿಯೂ ನಿರಂತರ ಕೊಳಚೆ ನೀರು ನಿಂತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಆಟವಾಡುವಾಗ ಬಿದ್ದು ಏನಾದರೂ ಪ್ರಾಣ ಹಾನಿ ಉಂಟಾದರೆ ಯಾರು ಜವಾಬ್ದಾರರು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನು ಪಂಚಾಯತ್ ಸಹಿತ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅಧಿಕಾರಿಗಳು, ಶಾಸಕರ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | 505ಕ್ಕೂ ಹಚ್ಚು ಡ್ರಕ್ಸ್ ಬಳಕೆದಾರರಿಗೆ ವೈದ್ಯಕೀಯ ಪರೀಕ್ಷೆ
ಇನ್ನಾದರೂ ಕುಂದಗೋಳ ತಾಲೂಕು ಪಂಚಾಯಿತಿ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತದೆಯೇ? ಅನಾಹುತ ಆಗುವುದನ್ನು ತಪ್ಪಿಸಲು ಮುಂಜಾಗ್ರತೆ ವಹಿಸುತ್ತದೆಯೇ? ಶಾಸಕರಾದರೂ ಇತ್ತ ಕಣ್ಣಾಯಿಸಿ ನೋಡುವರೇ? ಕಾದು ನೋಡಬೇಕಿದೆ!