ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಬಸನಗೌಡ ಪಾಟೀಲ ಹಾಗೂ ರವಿರಾಜ ಬಸಪ್ಪ ಜಾಡರ ಎಂಬ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಇಬ್ಬರೂ ರೈತರ ಬ್ಯಾಂಕಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಮತ್ತು ಮೃತ ರೈತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ ತಹಶೀಲ್ದಾರ್ ಮೂಲಕ ಒತ್ತಾಯಿಸಿದರು.
“ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಬಹಳ ದುಃಖಕರ ಸಂಗತಿ ಮತ್ತು ಅವರ ಬ್ಯಾಂಕಿನಲ್ಲಿರುವ ಸಾಲ, ಫೈನಾನ್ಸ್‌ನಲ್ಲಿ ಇರುವಂತಹ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವಾಗಿ ತಲಾ ₹10,00,000(ಹತ್ತ ಲಕ್ಷ) ನೀಡಬೇಕು. ಈಗಾಗಲೇ ಬೆಳೆವಿಮೆ ಕಂಪೆನಿಯವರು ಕುಂದಗೋಳ ಹೋಬಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಸಂಶಿ ಹೋಬಳಿಗೂ ಸೇರಿದಂತೆ ಉಳಿದ ಹೋಬಳಿಗಳಿಗೂ ಬೆಳೆವಿಮಾ ಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಅಂತರ್ಜಾತಿ ವಿವಾಹವಾಗಿದ್ದ ದಲಿತ ಮಹಿಳೆಯ ಹತ್ಯೆ: ಆರೋಪಿ ಪೋಷಣೆಗೆ ನಿಂತ ಪೊಲೀಸರ ಅಮಾನತಿಗೆ ದಸಂಸ ಆಗ್ರಹ
“ಮುಂಗಾರು ಮಳೆಯು ಅಧಿಕವಾಗಿರುವುದರಿಂದ ಶೆಂಗಾ ಮತ್ತು ಹೆಸರು ಉದ್ದು ಎಲ್ಲ ಬೆಳೆಗಳು ಸರಿಯಾಗಿ ಇರುವದಿಲ್ಲ. ಆದ ಕಾರಣ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ತಾಲೂಕಿನಲ್ಲಿ ಸರ್ಕಾರಿ ಗೊಬ್ಬರ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಸಕಾಲಕ್ಕಾಗಿ ಎಲ್ಲ ರೈತರಿಗೂ ಗೊಬ್ಬರ ಮುಟ್ಟುವ ಹಾಗೆ ಕ್ರಮ ಕೈಗೊಳ್ಳಬೇಕು. ಜುಲೈ 21 ರಂದು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಬೇಕು. ಕಿಸಾನ್ ಸಮ್ಮಾನ ಯೋಜನೆ ಹಣ ಈವರೆಗೂ ಬಿಡುಗಡೆ ಆಗಿರುವದಿಲ್ಲ. ಆದಷ್ಟು ಬೇಗನೆ ಕಳಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.