ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರವಾಹ ಭೀತಿ ಎದುರಾಗಿದ್ದು, ಸ್ಥಳೀಯರು ಬೆಳೆ ಮತ್ತು ಆಸ್ತಿಪಾಸ್ತಿಗೆ ಹಾನಿಯಾಗುವ ಭೀತಿ ಎದುರಾಗಿದೆ.
ಭಾರೀ ಮಳೆಯ ಹೊಡೆತಕ್ಕೆ ಸಿಲುಕಿ ಹೆಚ್ಚಿನ ರಸ್ತೆಗಳು ಮತ್ತು ಹೊಲಗಳು ಅಸ್ತವ್ಯಸ್ತವಾಗಿವೆ. ಹಾಗಾಗಿ ಸ್ಥಳೀಯರಿಗೆ ಮನೆಯೊಳಗೇ ಇರುವಂತೆ ಒತ್ತಾಯಿಸಲಾಗಿದೆ. ಬಹುತೇಕ ಎಲ್ಲ ಜಲಮೂಲಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಪ್ರಮುಖ ತೊರೆಗಳಾದ ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳ ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಧಾರವಾಡ ಮತ್ತು ನವಲಗುಂದ ತಾಲೂಕಿನ ಹಲವಾರು ಗ್ರಾಮಗಳ ಜನರು ಅಪಾಯದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್ ಅಗಲೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ನೀರು ಹರಿಯಲು ಯಾವುದೇ ಮಾರ್ಗವಿರಲಿಲ್ಲ. ಈ ಹಿನ್ನೆಲೆಯಲ್ಲಿ ನರೇಂದ್ರ-ಗಬ್ಬೂರು ಬೈಪಾಸ್‌ನಲ್ಲಿ ಸಾಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಯರಿಕೊಪ್ಪ ಕ್ರಾಸ್ ಬಳಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಡುರಸ್ತೆಯಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬೈಪಾಸ್‌ನಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಭಾರೀ ಮಳೆಯಿಂದಾಗಿ ಜಿಲ್ಲೆಯ ತಗ್ಗು ಪ್ರದೇಶಗಳು ಹಾಗೂ ಮನೆಗಳಿಗೆ ನೀರು ನುಗ್ಗಿದ್ದರಿಂದ ತೊಂದರೆ ಅನುಭವಿಸಬೇಕಾಯಿತು. ಕೆಎಂಎಫ್ ಜಂಕ್ಷನ್, ಕಲಘಟಗಿ ಟೋಲ್ ನಾಕಾ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಜಲಾವೃತಗೊಂಡಿದ್ದರಿಂದ ಧಾರವಾಡ-ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುವವರು ಎಂದಿನಂತೆ ತೊಂದರೆ ಅನುಭವಿಸಬೇಕಾಯಿತು.

ಹುಬ್ಬಳ್ಳಿ-ಧಾರವಾಡ, ಕಲಘಟಗಿ, ಅಳ್ನಾವರ, ನವಲಗುಂದ, ಕುಂದಗೋಳದಲ್ಲಿ ಧಾರಾಕಾರ ಮಳೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದು ಈ ಪ್ರದೇಶದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರೈತರಿಗೆ ಸಂಕಷ್ಟ
ಕಳೆದ ವರ್ಷ ಪ್ರವಾಹದಿಂದಾಗಿ ತೊಂದರೆ ಅನುಭವಿಸಿದ ರೈತರು ಮತ್ತೆ ಚಿಂತಿತರಾಗಿದ್ದಾರೆ. ಏಕೆಂದರೆ ಸುಮಾರು 200 ಹೆಕ್ಟೇರ್ ಪ್ರದೇಶದ ಖಾರಿಫ್ ಬೆಳೆಗಳಾದ ವಿಶೇಷವಾಗಿ ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ, ಟೊಮೆಟೊ, ಸೋರೆಕಾಯಿ ಮತ್ತು ಈರುಳ್ಳಿ ಬೆಳೆಗಳು ತೀವ್ರ ಹಾನಿಯಾಗಿವೆ. ಇದರ ನಡುವೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದೆಯೆಂಬ ಮುನ್ಸೂಚನೆ ರೈತರನ್ನು ಮತ್ತಷ್ಟು ಆತಂಕಕ್ಕೀಡುಮಾಡಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮಳೆ ನೀರಿನಿಂದ ಆವೃತಗೊಂಡ ಲೋಕೋಪಯೋಗಿ ಇಲಾಖೆ ಕಚೇರಿ!
ಜಿಲ್ಲಾಡಳಿತವು ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ(ಎಸ್‌ಡಿಆರ್‌ಎಫ್) ಸಿದ್ಧವಾಗಿದೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ತಹಶೀಲ್ದಾರರಿಗೆ ಸೂಚಿಸಿದೆ.