ಬರ ಘೋಷಿತ ತಾಲೂಕುಗಳಲ್ಲಿ ಬೆಳೆನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಕಡ್ಡಾಯವಾಗಿ ಎಫ್‍ಐಡಿ ಹೊಂದಿರಬೇಕು. ಎಫ್‍ಐಡಿಯಲ್ಲಿ ರೈತರು ತಮ್ಮ ಹಕ್ಕಿನಲ್ಲಿರುವ ಎಲ್ಲ ಸಾಗುವಳಿ ಭೂಮಿಗಳ ವಿವರಗಳನ್ನು ಸೇರಿಸಿರಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಎಫ್‍ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರಧನ ಸೌಲಭ್ಯ ದೊರೆಯುವುದರಿಂದ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೇನಂಬರ ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಒಟ್ಟು 3ಲಕ್ಷ ಪ್ಲಾಟ್‍ಗಳ ಪೈಕಿ ಈಗಾಗಲೇ 2.4 ಲಕ್ಷ ಪ್ಲಾಟ್‍ಗಳು ಅಂದರೆ ಶೇ.80ರಷ್ಟು ಪ್ಲಾಟಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸಲಾಗಿದೆ ಮತ್ತು ಸುಮಾರು 60ಸಾವಿರ ಪ್ಲಾಟ್‍ಗಳು ಅಂದರೆ ಶೇ.20ರಷ್ಟು ಬಾಕಿ ಇವೆ.
ಧಾರವಾಡ ತಾಲೂಕಿನ 13,927, ನವಲಗುಂದ ತಾಲೂಕಿನ 5,945, ಹುಬ್ಬಳ್ಳಿ ತಾಲೂಕಿನ 8,493, ಕಲಘಟಗಿ ತಾಲೂಕಿನ 12,036, ಕುಂದಗೋಳ ತಾಲೂಕಿನ 8,848, ಹುಬ್ಬಳ್ಳಿನಗರ ತಾಲೂಕಿನ 6,355, ಅಳ್ನಾವರ ತಾಲೂಕಿನ 987 ಮತ್ತು ಅಣ್ಣಿಗೇರಿ ತಾಲೂಕಿನ 3,476 ಪ್ಲಾಟ್‍ಗಳು ಎಫ್‍ಐಡಿಯಲ್ಲಿ ಸೇರ್ಪಡೆಯಾಗಿಲ್ಲ.
ಆದ್ದರಿಂದ ಈ ಕೂಡಲೇ ಇನ್ನೂ ಎಫ್‍ಐಡಿ ಮಾಡಿಸದ ರೈತರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು ಹಾಗೂ ಫ್ರೂಟ್ಸ್ ಐಡಿ ಹೊಂದಿದವರು ತಮ್ಮ ಎಲ್ಲ ಸರ್ವೇನಂಬರಗಳನ್ನು ಎಫ್‍ಐಡಿ ಜೊತೆ ಸೇರಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ರೈತರು ಎಫ್‍ಐಡಿ ಮಾಡಿಸಿಕೊಳ್ಳಲು ಅವರ ಆಧಾರಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ತಮ್ಮ ಮೊಬೈಲ್ ಸಂಖ್ಯೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಆಗಿದ್ದಲ್ಲಿ ಅವರ ಜಾತಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಬರಪರಿಹಾರದ ಹಣ ಮಾತ್ರವಲ್ಲದೇ, ಬೆಳೆವಿಮೆ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಹಾಗೂ ಬ್ಯಾಂಕ್ ಸಾಲಪಡೆಯಲು ಎಫ್‍ಐಡಿ ಕಡ್ಡಾಯವಾಗಿದೆ.
ರೈತರು ಮೇಲೆ ತಿಳಿಸಿದ ದಾಖಲಾತಿಗಳೊಂದಿಗೆ ವಿಳಂಬ ಮಾಡದೇ ಈ ಕೂಡಲೇ ಎಫ್‍ಐಡಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.