ರಾಜ್ಯದಲ್ಲಿ ನಡೆಯುತ್ತಿರುವ ಪೋಕ್ಸೊ, ಬಾಲ್ಯ ವಿವಾಹ, ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯಲು ಎಲ್ಲರೂ ಗಮನ ಹರಿಸುವುದು ಅತೀ ಅವಶ್ಯವಾಗಿದೆ ಎಂದು ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಪರಶುರಾಮ ದೊಡ್ಡಮನಿ ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಆಯೋಜಿಸಲಾಗಿದ್ದ, ಜಿಲ್ಲೆಯ ಮಕ್ಕಳ ರಕ್ಷಣೆಗಾಗಿ ಇರುವ ಬಾಲ ನ್ಯಾಯ ಕಾಯ್ದೆ-2015, ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ 2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಮಕ್ಕಳ ರಕ್ಷಣಾ ನೀತಿ-2016, ಮಕ್ಕಳ ಸಹಾಯವಾಣಿ -1098 ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ನೈತಿಕತೆ ಕಡಿಮೆಯಾಗುತ್ತಿದ್ದು, ಇದನ್ನು ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು. ಆಧುನಿಕ ದಿನಗಳಲ್ಲಿಯೂ ಜನರಲ್ಲಿ ಮೌಢ್ಯತೆ ಹೆಚ್ಚಾಗಿದ್ದು, ಅದನ್ನು ಹೋಗಲಾಡಿಸುವಲ್ಲಿ ಹೆಚ್ಚು ಅರಿವು ಮತ್ತು ಜಾಗೃತಿ ಮೂಡಿಸಬೇಕು. ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಇರುವ ಭೇದ-ಭಾವ ದೂರವಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಹೆಚ್.ಹೆಚ್.ಕುಕನೂರ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರನ್ನು ಮರಳಿ ಶಾಲೆಗೆ ಸೇರಿಸುವುದು ಅವಶ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಇದರ ಕುರಿತು ಶಾಲೆಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಕೊಪ್ಪಳ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ರಾಘವೇಂದ್ರ ಭಟ್ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ 2012, ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಅರಿವು ಮೂಡಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರುತ್ತದೆ: ಸಚಿವ ಸತೀಶ್ ಜಾರಕಿಹೊಳಿ
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಗೋಪಾಲ.ಎಚ್.ಲಮಾಣಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿದರು. ತಹಶೀಲ್ದಾರ್ ಮಹ್ಮದ ಅಲಿ, ಕರೆಪ್ಪ ಕೌಜಲಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು.