ವಿಶ್ವದ ಕಾರ್ಮಿಕರೇ ಒಂದಾಗಿ ಎಂದು ವಿಶ್ವದ ಕಾರ್ಮಿಕರಿಗೆ ಕರೆ ನೀಡಿದ ಕಾರ್ಮಿಕ ವರ್ಗದ ನಾಯಕ, ತತ್ವಜ್ಞಾನಿ, ಮೇಧಾವಿ ಕಾರ್ಲ್ ಮಾರ್ಕ್ಸ್ ರವರ 143ನೇ ಸ್ಮರಣ ದಿನವನ್ನು ಧಾರವಾಡದ ಮುಮ್ಮಿಗಟ್ಟಿ ಗ್ರಾಮದಲ್ಲಿ ಎಐಕೆಕೆಎಂಎಸ್ ಜಿಲ್ಲಾ ಸಮಿತಿಯಿಂದ ಆಚರಿಸಿದರು.
ಈ ಕುರಿತು ಎಐಕೆಕೆಎಮ್ಎಸ್ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ಕಾರ್ಲ್ ಮಾರ್ಕ್ಸ್ ಶೋಷಿತ ಜನತೆಗೆ ವಿಮುಕ್ತಿಯ ಪತ ತೋರಿಸಿದವರು. ವರ್ಗ ಸಂಘರ್ಷದ ಗತಿಯಲ್ಲೇ ಸಮಾಜ ನಿರಂತರವಾಗಿ ಬದಲಾಗುವುದು, ಅಂತಿಮವಾಗಿ ವರ್ಗವೇ ಇಲ್ಲದ ಸಮಾಜವಾದಿ ಸಮಾಜಕ್ಕೆ ಜನ್ಮ ನೀಡುವುದು ಎಂಬುದನ್ನು ಇತಿಹಾಸದ ಅಧ್ಯಯನದ ಮೂಲಕ ತೋರಿಸಿಕೊಟ್ಟು ದುಡಿಯುವ ಜನತೆಯ ನೋವುಗಳಿಗೆ ಕೊನೆ ಇದೆ ಎಂದು ಸಾಬೀತುಪಡಿಸಿದವರು.
ಇಂದು ದೇಶ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದೆ. ಕಾರ್ಮಿಕರ, ರೈತ, ಕೃಷಿ ಕಾರ್ಮಿಕರ ಬದುಕು ಹೀನಾಯ ಪರಿಸ್ಥಿತಿಯಲ್ಲಿದೆ. ಈ ಬದುಕಿನ ಬದಲಾವಣೆಗಾಗಿ ಮಹಾನ್ ನಾಯಕರಾದ ಕಾರ್ಲ ಮಾರ್ಕ್ಸ್ ರವರ ವಿಚಾರ ಅತ್ಯಮೂಲ್ಯ. ಉನ್ನತವಾದ ಕಾರ್ಮಿಕ ವರ್ಗದ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನಗಳ ಸಮಸ್ಯೆಗಳ ವಿರುದ್ಧ ಹೋರಾಟ ಕಟ್ಟುತ್ತಾ ದುಡಿಯುವ ಜನತೆಗೆ ಕಾರ್ಮಿಕ ವರ್ಗದ ಪ್ರಜ್ಞೆಯನ್ನು ಬೆಳೆಸಿ ಅಂತಿಮವಾಗಿ ಶೋಷಣೆಯೇ ಇಲ್ಲದ ಸಮಾಜವನ್ನು ಕಟ್ಟಲು ಎಲ್ಲಾ ದುಡಿಯುವ ಜನತೆ ಒಂದಾಗಿ ಹೋರಾಟ ಕಟ್ಟುವುದು ಇಂದಿನ ಗಳಿಗೆಯ ಅವಶ್ಯಕತೆ ಎಂದರು.
ಈ ಕಾರ್ಯಕ್ರಮದಲ್ಲಿ ಮುಮ್ಮಿಗಟ್ಟಿ ಗ್ರಾಮದ ಸರಸ್ವತಮ್ಮ ಮಾದರ್, ಯಲ್ಲಮ್ಮ ಕರಿಯಪ್ಪ ಮಾದರ್, ಕರಿಯಮ್ಮ, ಭಾರತಿ, ಹನುಮಮ್ಮ ಮಾದರ್, ಇನ್ನಿತರರು ಇದ್ದರು.