ಕರ್ನಾಟಕ ಏಕೀಕರಣಕ್ಕೆ ಮೂಲ ಬುನಾದಿ ಹಾಕಿದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಆಡಳಿತ ಮಂಡಳಿಯ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಬಣ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷರಾಗಿ ಚಂದ್ರಕಾಂತ ಬೆಲ್ಲದ, ಉಪಾಧ್ಯಕ್ಷರಾಗಿ ಸಂಜೀವ ಕುಲಕರ್ಣಿ, ಕಾರ್ಯಾಧ್ಯಕ್ಷರಾಗಿ ಬಸವಪ್ರಭು ಹೊಸಕೋರಿ, ಕೋಶಾಧ್ಯಕ್ಷರಾಗಿ ಸತೀಶ್ ತುರುಮರಿ, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಹಲಗತ್ತಿ, ಸಹ ಕಾರ್ಯದರ್ಶಿಯಾಗಿ ಶಂಕರ ಕುಂಬಿ, ಮಹಿಳಾ ಮೀಸಲು ಸ್ಥಾನಕ್ಕೆ ವಿಶ್ವೇಶ್ವರಿ ಹಿರೇಮಠ, ಪರಿಶಿಷ್ಟ ಜಾತಿ ಮತ್ತು ಪಂಗಡ ಮೀಸಲು ಸ್ಥಾನದಲ್ಲಿ ಡಾ.ಧನವಂತ ಹಾಜವಗೋಳ ಪುನಃ ಆಯ್ಕೆಯಾಗಿದ್ದಾರೆ.

ಆರಂಭದಿಂದ ಕೈ-ಕಮಲ ಪಕ್ಷಗಳು ತೆರೆಮರೆಯಲ್ಲೇ ಕೆಲಸ ಮಾಡಿದ್ದವು. ಈ ಬಾರಿಯ ಕವಿಸಂ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಬಣ 15 ಕ್ಕೆ 15 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದರಿಂದ ಮೋಹನ ಲಿಂಬಿಕಾಯಿ’ಗೆ ಮುಖಭಂಗವಾಗಿದೆ.
ಕಾರ್ಯಕಾರಿಣಿ ಮಂಡಳಿಯ ಏಳಕ್ಕೆ ಏಳು ಸ್ಥಾನಗಳಿಗೆ ವೀರಣ್ಣ ಒಡ್ಡಿನ, ಡಾ.ಶೈಲಜಾ ಅಮರಶೆಟ್ಟಿ, ಗುರು ಹಿರೇಮಠ, ಮಹೇಶ ಹೊರಕೇರಿ, ಶಿವಾನಂದ ಬಾವಿಕಟ್ಟಿ, ಡಾ.ಜೀನದತ್ತ ಹಡಗಲಿ, ಪ್ರೊ.ಶಶಿಧರ್ ತೋಡಕರ್ ಹೀಗೆ ಬೆಲ್ಲದ ಬಣದಿಂದ ಆಯ್ಕೆಯಾಗಿದ್ದಾರೆ.