ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡಿ ಅಪ್‌ಲೋಡ್ ಮಾಡಿದ್ದ ಯುವಕನೊಬ್ಬನನ್ನು ಗುಂಪೊಂದು ಅಪಹರಿಸಿ, ಬೆತ್ತಲೆಗೊಳಿಸಿ, ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಧಾರವಾಡದ ನಿವಾಸಿ ಸಂದೀಪ್ ಹಲ್ಲೆಗೊಳಗಾದ ಯುವಕ ಎಂದು ತಿಳಿದುಬಂದಿದೆ. ಆತ ‘ಹುಬ್ಬಳ್ಳಿಗೆ ನಾನೇ ಡಾನ್’ ಎಂದು ರೀಲ್ಸ್ ಮಾಡಿದ್ದ. ಅಲ್ಲದೆ, ಈ ಹಿಂದೆ ಸ್ನೇಹಿತನಾಗಿದ್ದ ಪ್ರಜ್ವಲ್ ಎಂಬಾತನ ತಾಯಿ ಬಗ್ಗೆ ಅವಾಚ್ಯ ಶಬ್ದಗಳಿಂದ ಮಾತನಾಡಿ ರೀಲ್ಸ್ ಮಾಡಿದ್ದ ಎಂದು ಆರೋಪಿಸಲಾಗಿದೆ.
ತನ್ನ ತಾಯಿಯನ್ನು ನಿಂದನೆ ಮಾಡಿದ್ದರಿಂದ ಉದ್ರಿಕ್ತಗೊಂಡ ಪಜ್ವಲ್, ತನ್ನ ಸ್ನೇಹಿತರಾದ ವಿನಾಯಕ್, ಗಣೇಶ್, ಸಚಿನ್, ಮಂಜು ಜೊತೆ ಸೇರಿ ಸಂದೀಪ್‌ನನ್ನುಅಪಹರಿಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಸಂತೋಷ್ ಬಾಬು, “ಎರಡು ವಿಡಿಯೋಗಳಿಂದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಜ್ವಲ್ ತಾಯಿ ಬಗ್ಗೆ ಸಂದೀಪ್ ಅವಾಚ್ಯವಾಗಿ ನಿಂದಿಸಿ ರೀಲ್ಸ್ ಮಾಡಿದ್ದ. ಇದರಿಂದ ಸಿಟ್ಟಾದ ಪ್ರಜ್ವಲ್ ಮತ್ತು ಆತನ ಸ್ನೇಹಿತರು ಈತನನ್ನು ಅಪಹರಿಸಿ, ಥಳಿಸಿದ್ದಾರೆ. ಮಾರ್ನಾಲ್ಕು ತಿಂಗಳುಗಳ ಹಿಂದೆ ಘಟನೆ ನೆಡೆದಿದೆ. ಈವರೆಗೆ ಸಂದೀಪ್ ದೂರು ನೀಡಿಲ್ಲ” ಎಂದು ತಿಳಿಸಿದ್ದಾರೆ.
ಹಲ್ಲೆ ಪ್ರಕರಣ ಸಂಬಂಧ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜು ಎಂಬವರನ್ನು ವಶಕ್ಕೆ ಪಡೆದ ಹುಬ್ಬಳ್ಳಿ ಶಹರ ಠಾಣಾ ಪೊಲೀಸರು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೀಲ್ಸ್ ಮಾಡಿದ್ದ ಸಂದೀಪ್ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.