ಜಗತ್ತಿನಲ್ಲಿ ಎಲ್ಲದಕ್ಕಿಂತ ಜ್ಞಾನಕ್ಕೆ ಬೆಲೆಯಿದೆ ಮತ್ತು ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ನಮ್ಮಲ್ಲಿ ಮೂಡಿದಾಗ ಮಾತ್ರ ನಾವು ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಸಮಾಜದಲ್ಲಿ ಎಲ್ಲಿಯಾದರೂ ಒಂದು ದೊಡ್ಡ ಗೌರವ ಮತ್ತು ಸ್ವಾಗತ ಬೇಕು ಅಂದರೆ ಅದು ಒಳ್ಳೆಯ ಪಾಂಡಿತ್ಯದ ಜ್ಞಾನದಿಂದ ಮಾತ್ರ ಎಂದು ಕವಿವಿ ಕುಲಸಚಿವ ಎ ಚೆನ್ನಪ್ಪ ಅವರು ಹೇಳಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
“ಇನ್‌ಕಮ್ ಇದ್ದರೆ ಸಮಾಜದಲ್ಲಿ ವೆಲ್‌ಕಮ್ ಸಿಗುತ್ತದೆ ಇಲ್ಲಿ ಇನ್‌ಕಮ್ ಎಂದರೆ ಅತಿಯಾದ ಕಾನೂನು ಜ್ಞಾನವನ್ನು ಪಡೆದುಕೊಳ್ಳುವುದು ಎಂದು ಅರ್ಥ” ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ ಎಸ್ ಆರ್ ಮಂಜುಳಾ ಅವರು ಮಾತನಾಡಿ, “ಕಾಲೇಜಿನ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ಬೆಂಚ್ ಹಾಗೂ ಇನ್ನಿತರ ಉಪಕರಣಗಳ ಅವಶ್ಯಕತೆ ಇದೆ. ಶಿಥಿಲಗೊಂಡಿರುವ ಕಾರ್ಯಕ್ರಮದ ಸಭಾಂಗಣವನ್ನು ಅಭಿರುದ್ಧಿಪಡಿಸುವಂತೆ ಮತ್ತು ಮಹಾವಿದ್ಯಾಲಯಕ್ಕೆ ಖಾಯಂ ಶಿಕ್ಷಕರನ್ನು ನೇಮಿಸಬೇಕು” ಎಂದು ನೆರೆದ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಕುಲಸಚಿವರಿಗೆ ಮನವರಿಕೆ ಮಾಡುವ ಮೂಲಕ ಬೇಡಿಕೆಯಿಟ್ಟರು.
ಈ ಸುದ್ದಿ ಓದಿದ್ದೀರಾ? ವಿಧಾನ ಪರಿಷತ್ ಉಪಚುನಾವಣೆ; ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟ
ಕುಲಸಚಿವರು ಪ್ರಾಂಶುಪಾಲರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ವಿಭಿನ್ನರೀತಿಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪ್ರಾಧ್ಯಾಪಕರುಗಳಾದ ಡಾ ಆರ್ ಎಂ ಕಾಂಬಳೆ, ಡಾ. ಶಶಿರೇಖಾ ಮಾಳಗಿ, ಡಾ. ಶಿವಕುಮಾರ ಎಂ ಎ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.