- ಅಭಿವೃದ್ಧಿ ಕಡೆಗೆ ಗಮನ ಹರಿಸದ ಅಧಿಕಾರಿಗಳ ಮೇಲೆ ಸ್ಥಳೀಯರ ಹಿಡಿಶಾಪ
- ರೋಗಾಣು ಹರಡುವಿಕೆಗೆ ಕಡಿವಾಣ ಹಾಕುವರೇ ಅಧಿಕಾರಿಗಳು?
ಧಾರವಾಡ ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದರೆ ಕುಂದಗೋಳ. ಈ ತಾಲೂಕಿನಲ್ಲಿ ಮೂಲಭೂತ ಸಮಸ್ಯೆಗಳದ್ದೇ ದರ್ಬಾರು ಎಂದರೂ ತಪ್ಪಾಗಲಾರದು. ಅನ್ಯ ತಾಲೂಕುಗಳಿಗೆ ಹೋಲಿಸಿದರೆ ಕುಂದಗೋಳ ತಾಲೂಕಿನಲ್ಲಿ ಹಲವು ಸಮಸ್ಯೆಗಳು ಎದ್ದು ಕಾಣುತ್ತವೆ.
ತಾಲೂಕಿನ ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬಿಳೆಬಾಳ, ತಾಲೂಕು ಕೇಂದ್ರದಿಂದ 5 ಕಿ.ಮೀ ದೂರದಲ್ಲಿದೆ. 2011 ರ ಜನಗಣತಿ ಪ್ರಕಾರ 1515 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಒಟ್ಟು 140ಕ್ಕೂ ಹೆಚ್ಚು ಮನೆಗಳಿದ್ದು, ದೇವನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತಿದೆ. ಒಟ್ಟು 5 ಪಂಚಾಯತ್ ಸದಸ್ಯರ ಪೈಕಿ 4 ಜನ ಸದಸ್ಯರು ಬಿಳೆಬಾಳದವರೇ ಆಗಿದ್ದರೂ, ಬಿಳೆಬಾಳ ಗ್ರಾಮವು ಕೆಲವು ಸಮಸ್ಯೆಗಳ ಆಗರವಾಗಿದೆ.
ಗ್ರಾಮದ ಅಗಸಿ ಅಂಗಳದಲ್ಲಿ ಸಣ್ಣ ಕೊಳ್ಳವೊಂದು ಕಲುಷಿತ ನೀರಿನಿಂದ ಕೂಡಿಕೊಂಡಿದೆ. ಮತ್ತು ಹನುಮಂತ ದೇವರ ಗುಡಿ, ದುರ್ಗಮ್ಮ ಗುಡಿ, ಭರಮದೇವರ ಗುಡಿ ಹಾಗೂ ಮೆಹಬೂಬ ಸುಬುಹಾನಿ ದರ್ಗಾ ಆವರಿಸಿಕೊಂಡ ಪ್ರದೇಶದ ಮಧ್ಯದಲ್ಲಿ ಹಲವು ಓಣಿಗಳಿಂದ ಬರುವ ಕಲುಷಿತ ನೀರು ಒಂದೇ ಕಡೆಗೆ ಶೇಖರಣೆ ಆಗುತ್ತದೆ. ಅದರ ಸುತ್ತಮುತ್ತಲು ಹತ್ತಾರು ಕುಟುಂಬಗಳು ವಾಸಮಾಡುತ್ತವೆ. ಶೇಖರಣೆಯಾಗಿ ನಿಂತ ಕೊಳಚೆ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ಜನ ರೋಗಾಣುಗಳಿಂದ ಬಳಲುವ ದುಸ್ಥಿತಿ ಬಂದೊದಗಿದೆ.

ಇಲ್ಲಿ ನಿಂತ ಕಲುಷಿತ ನೀರು ಮುಂದೆ ಊರು ದಾಟಲು ಅಡ್ಡವಾಗಿ ಹೊಲವೊಂದಿದೆ. ಆ ಹೊಲದ ಮಾಲೀಕರು ಈ ಗಲೀಜು ನೀರನ್ನು ತಡೆ ಹಿಡಿಯಲು ಅಡ್ಡವಾಗಿ ಒಡ್ಡನ್ನು ಹಾಕಿದ್ದಾರೆ. ಮತ್ತು ಇದೇ ಹೊಲದಲ್ಲಿ ಒಂದು ಅಂಗನವಾಡಿಯೂ ಇದ್ದು ಕಲುಷಿತ ನೀರು ನಿಂತ ಕಾರಣ ಮಕ್ಕಳನ್ನೂ ದಾಟಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಚಿಣ್ಣರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಇನ್ನು ದನ ಮೇಯಿಸುವವರು, ವ್ಯವಸಾಯಕ್ಕೆ ಹೋಗುವವರು, ಸ್ಥಳಿಯ ನಿವಾಸಿಗಳು ಇದೇ ಗಲೀಜು ನೀರಿನಲ್ಲೆ ಓಡಾಡುವ ಪರಿಸ್ಥಿತಿ ಬಂದಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಜೀವನ ಕಳೆಯುತ್ತಿದ್ದಾರೆ.
ದರ್ಗಾಕ್ಕೆ ಹೋಗುವ ಭಕ್ತರು ಇದೇ ಗಲೀಜಿನಲ್ಲೇ ಹೋಗಬೇಕು. ಹೆಣ್ಣು ಮಕ್ಕಳು, ವೃದ್ಧರು ಜೀವಹಿಡಿದು ಹೋಗುವ ವಾತಾವರಣ ಸೃಷ್ಟಿಯಾಗಿದೆ. ಹಲವು ಬಾರಿ ಪಿಡಿಓ, ಸಿಇಓ, ಶಾಸಕರು ಸ್ಥಳಿಕ್ಕೆ ಭೇಟಿ ಕೊಟ್ಟು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರಾದರೂ, ಈವರೆಗೆ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ತಮ್ಮ ಅಳಲನ್ನು ಹಂಚಿಕೊಳ್ಳುತ್ತಾರೆ. ಅಧಿಕಾರಿಗಳು, ರಾಜಕಾರಣಿಗಳ ಮೇಲೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ನಾವೂ ಮನುಷ್ಯರಲ್ಲವೆ? ಹೀಗೆ ಗಲೀಜು ನೀರಿನ ನಡುವೆ ಬದುಕಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ್ ಮಾತನಾಡಿ, “ಈ ಸಮಸ್ಯೆಯ ಕುರಿತು ಈಗಾಗಲೆ ನನ್ನ ಗಮನಕ್ಕೆ ಬಂದಿದೆ ಮತ್ತು ಈ ಸಮಸ್ಯೆ ಬಗೆಹರಿಸಲು ಈಗಾಗಲೆ 36 ಲಕ್ಷದ ಯೋಜನೆಯ ಹಾಕಲಾಗಿದೆ. ಆದಷ್ಟು ಬೇಗ ಬಗೆಹರಿಸುತ್ತೇವೆ” ಎಂದರು.
ಗ್ರಾಪಂ ಅಧ್ಯಕ್ಷ ಈರಪ್ಪ ಸನದಿ, “ಈಗಾಗಲೆ ಜನಸಂಪರ್ಕ ಸಭೆಯಲ್ಲಿಯೂ ಮನವಿ ಸಲ್ಲಿಸಲಾಗಿದೆ ಮತ್ತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ” ಎಂದಿದ್ದಾರೆ. ಬಾಬುಸಾಬ ಕಿಲ್ಲೆದಾರ್, ಇಸ್ಮಾಯಿಲ್ ಸಾಬ ಕಿಲ್ಲೆದಾರ್, ಶಂಕರ ಚಲವಾದಿ ಇನ್ನಿತರರು ಮಾತನಾಡಿ ಮಾಹಿತಿ ಮತ್ತು ಸಮಸ್ಯೆ ಹೇಳಿಕೊಂಡರು.
ಕಳೆದ ಎರಡು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಇನ್ನಾದರೂ ಮುಕ್ತಿ ಸಿಗುವುದೆ? ರೋಗಾಣು ಹರಡುವಿಕೆಗೆ ಕಡಿವಾಣ ಹಾಕುವರೆ? ಕಾದುನೋಡಬೇಕಿದೆ.

