ಕನ್ನಡದ ಪ್ರತಿಯೊಂದು ಪದಗಳ ಉಚ್ಛಾರದೊಂದಿಗೆ ತೊಟ್ಟಿಕ್ಕುವ ಜೇನಿನ ಹನಿಗಳ ಸ್ವಾದ ಸವಿಯುವ ಭಾಗ್ಯವನ್ನು ನಾವೆಲ್ಲ ದಿನದಿಂದ ದನಕ್ಕೆ ಕಳೆದುಕೊಳ್ಳುವ ಈ ಸಂದರ್ಭದಲ್ಲಿ ‘ಕನ್ನಡ ಸಾಹಿತ್ಯವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ’ಯನ್ನು ಹುಟ್ಟುಹಾಕಿದ್ದು ತುಂಬಾ ಸಂತಸ ತಂದಿದೆ. ಕನ್ನಡ ಮಾತನಾಡುವುದು ಮತ್ತು ಮಾತನಾಡಿಸುವುದು ಪ್ರತಿ ಮನೆಗಳ ತಾಯಂದಿರಿಂದಲೇ ಮತ್ತೆ ಪ್ರಾರಂಭಿಸಲು ಪಣ ತೊಡಬೇಕಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ್ ತುರಮರಿ ಹೇಳಿದರು.
ಜ. 31ರಂದು ಧಾರವಾಡದ ರಾ ಹ ದೇಶಪಾಂಡೆ ಸಭಾಭವನದಲ್ಲಿ ಕನ್ನಡ ಉಳಿಸಲು, ಬೆಳೆಸಲು ಪಣ ತೊಡಿರಿ ಎಂಬ ಘೋಷವಾಕ್ಯದೊಂದಿಗೆ ‘ಕನ್ನಡ ಸಾಹಿತ್ಯವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ’ಯ ಉದ್ಘಾಟನೆ ಮತ್ತು ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡುತ್ತಾ,
ಕನ್ನಡ ಮಾತನಾಡುವುದನ್ನು ಮತ್ತೆ ಮನೆಗಳಿಂದಲೇ ಪ್ರಾರಂಭಿಸುದರಲ್ಲಿ ಪ್ರಮುಖ ಪಾತ್ರ ತಾಯಂದಿರದ್ದಾಗಿದೆ. ಮಗು ಜನ್ಮಿಸಿದ ಕ್ಷಣದಿಂದ, ಮಾತು ಕಲಿಯುವವರೆಗೆ, ಸಂಪೂರ್ಣ ಜ್ಞಾನ ಪಡೆಯುವವರೆಗೆ ತಾಯಿಯೇ ಗುರುವಾಗಿರುವುದರಿಂದ ಕನ್ನಡ ಉಳಿಸಲು, ಕನ್ನಡ ಬೆಳೆಸಲು ತಾಯಿಯು ಪಣತೊಟ್ಟಲ್ಲಿ ಭಾಷಾಭಿಮಾನ, ಭಾಷಾಪ್ರೇಮ, ಸಾಹಿತ್ಯ ಅಭಿರುಚಿಯು ರಕ್ತದ ಕಣಕಣದಲ್ಲೂ ತುಂಬಿ ಹರಿಯುವುದರಲ್ಲಿ ಸಂದೇಹವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಹೆಚ್ಚು ಯುವಜನರನ್ನು ಕರೆತರುವ ಕೆಲಸವಾಗಲಿ. ಕವಿಗಳು, ಸಂಗೀತಗಾರರು ತಮ್ಮ ಮಕ್ಕಳಿಗೆ ಸಂಗೀತ, ಕವಿತೆ, ಕಲೆಗಳನ್ನು ಕಲಿಸುವಂತಾಗಲಿ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಮಹಮ್ಮದ್ಅಲಿ ಗುಡೂಭಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ದ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.
ಮೂಲ ಜಾನಪದ ಕಲಾವಿದ ರಾಮು ಮೂಲಗಿ ಗಂಜರ ಭಾರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕನ್ನಡವು ನಮ್ಮೆಲ್ಲರ ತಾಯಿ ಭಾಷೆಯಾಗಿದೆ. ಇತ್ತೀಚಿಗೆ ಕುಟುಂಬಗಳಲ್ಲಿ ಕನ್ನಡಪರ ಕಾಳಜಿ ಕಡಿಮೆಯಾಗುತ್ತಿದೆ. ಮತ್ತು ಇತ್ತೀಚಿಗೆ ಬರುವ ಜಾನಪದ ಹಾಡುಗಳು (ಡಿಜೆ) ಮೂಲ ಜನಪದಗಳಲ್ಲ. ಅವುಗಳಿಂದ ನಮ್ಮ ಸಂಸ್ಕೃತಿಯು ಹಾಳಾಗುತ್ತಿದೆ. ಜನಪದ ಸಾಹಿತ್ಯವು ತಾಯಿಬೇರಾಗಿದ್ದು, ಆ ಸಾಹಿತ್ಯಕ್ಕೆ ನಾವೆಲ್ಲರೂ ಮಾಲೀಕರಾಗಿದ್ದೇವೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಫೆ. 3 ಮತ್ತು 4ಕ್ಕೆ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ನಂತರ ಕವಿಗಳು ಮತ್ತು ಕವಿಯತ್ರಿಯರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಪದಗ್ರಹಣ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಮಹಮ್ಮದ್ಅಲಿ ಗುಡೂಭಾಯಿ, ಉಪಾಧ್ಯಕ್ಷರಾಗಿ ಜಿ ವಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಬಿ ಕೆ ಸೋದರ, ಸಹ ಕಾರ್ಯದರ್ಶಿ ಪುಷ್ಪಾ ಹಿರೇಮಠ, ಕೋಶಾಧಿಕಾರಿ (ಖಜಾಂಚಿ) ರಮೇಶ ಗಾಯಕವಾಡ, ಕಾರ್ಯಕಾರಿ ಸದಸ್ಯರುಗಳಾಗಿ; ಊರ್ಮಿಳಾ ಜಕ್ಕಣ್ಣವರ, ಸುಧಾ ಕಬ್ಬೂರ, ವೀಣಾ ಆಯ್ಕೆಯಾದರು. ಎಪಿಎಂಸಿ ಮಾಜಿ ಅಧ್ಯಕ್ಷ, ಸಮಾಜ ಸೇವಕ ಕೃಷ್ಣಾ ಕೋಳನಟ್ಟಿ ವೇದಿಕೆ ಮೇಲಿದ್ದರು. ಸುಧಾ ಕಬ್ಬೂರ ನಿರೂಪಣೆ ಮಾಡಿದರು.