ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಹತ್ತಿರದ ದೊಡ್ಡಹಳ್ಳ ಹಾಗೂ ಬೆಣ್ಣೆಹಳ್ಳ ಸೇತುವೆ ಕೊಚ್ಚಿ ಹೋದದ್ದನ್ನು ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕೂಡಲೇ ವಿಶೇಷ ತಜ್ಞರ ಜೊತೆ ಚರ್ಚಿಸಿ ಸ್ಟೀಲ್ ಬ್ರಿಡ್ಜ್ ಅಥವಾ ನೂತನ ಸೇತುವೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.
“ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ ಜೊತೆ ಚರ್ಚಿಸಿದ್ದು, ತಕ್ಷಣ ವರದಿ ನೀಡಿ ಸರ್ಕಾರದಿಂದ ಮಂಜೂರಾತಿ ಪಡೆಯಬೇಕು” ಎಂದು ಹೇಳಿದ ಅವರು, “ತಜ್ಞರ ಅಭಿಪ್ರಾಯದ ನಂತರ ಸೇತುವೆ ದುರಸ್ಥಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು” ಸೂಚಿಸಿದರು.
ನವಲಗುಂದ ನಗರದ ಹುಗ್ಗಿ ಓಣಿಯ ಮನೆ ಬಿದ್ದ ತರುವಾಯ ದ್ಯಾಮವ್ವ ಬನ್ನೆಣ್ಣವರ ಹಾಗೂ ಕಳ್ಳಿಮಠ ಮೆಹಬೂಬ ನಗರದ ಮೋದಿನಸಾಬ ಶಿರಕೋಳ ಅವರುಗಳಿಗೆ ತಲಾ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ತಿಳಿಸಿದರು.

ಇದನ್ನೂ ಓದಿ: ಧಾರವಾಡ | ಭಾರಿ ಮಳೆಗೆ ಪ್ರವಾಹ ಸೃಷ್ಟಿ; ನಡುಗಡ್ಡೆಯ ಮನೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ರಕ್ಷಣೆ
ಶಲವಡಿ ನಾಯಕನೂರ ಗ್ರಾಮದ ನಡುವೆ ಜಮೀನಿನಲ್ಲಿ ಹೆಸರು ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದ್ದನ್ನು ವೀಕ್ಷಿಸಿದರು . ಅಣ್ಣಿಗೇರಿ ತಾಲ್ಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಮನೆ ಕುಸಿದು ಹಾನಿಯಾದ ಮನೆಗೆ ಭೇಟಿ ನೀಡಿ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಹೇಳಿದರು. ಈಗಾಗಲೇ ಮನೆ ಕುಸಿತದಲ್ಲಿ ಸಿಲುಕಿದ 4 ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ತಿಳಿಸಿದರು.ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಹತ್ತಿರ ಶಿರಗುಪ್ಪಿ ಗ್ರಾಮದ ನಿಂಗವ್ವ ತೊಗರಿಮನಿ ಅವರ ಹೊಲದಲ್ಲಿ ಹೆಸರು ಬೆಳೆ ಹಾನಿಯಾಗಿದ್ದನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ತಕ್ಷಣ ವರದಿ ಮಾಡಿ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.