ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಗ್ರಾಮದೇವಿ ದ್ಯಾಮವ್ವ ಹಾಗೂ ದುರ್ಗವ್ವ ಜಾತ್ರೆಯ ಹೊನ್ನಾಟದ ಕೊನೆಯ ದಿನ; ಗುರುವಾರ, ಹಿಂದೂ ಭಕ್ತರೊಡಗೂಡಿ ಮುಸಲ್ಮಾನರೂ ದೇವಿಯರನ್ನು ಹೆಗಲ ಮೇಲೆ ಹೊತ್ತು ಹೊನ್ನಾಟವಾಡಿ ಭಾವೈಕ್ಯತೆ ಮೆರೆದಿದ್ದಾರೆ.
ಬಿಳಿ ಶುಭ್ರ ಬಟ್ಟೆ ತೊಟ್ಟ ಮುಸ್ಲಿಮರು ತಲೆಗೆ ಬಿಳಿ ಟೋಪಿ ಧರಿಸಿ ಹೊನ್ನಾಟದ ಓಕುಳಿಯಲ್ಲಿ ಮಿಂದೆದ್ದರು. ಇದರಲ್ಲಿ ಮುಸ್ಲಿಂ ಮಹಿಳೆಯರೂ ಪಾಲ್ಗೊಂಡಿದ್ದರು. ಹಿಂದೂಗಳು ಜಾತ್ರೆಗಾಗಿ ಮಾಡುವ ಎಲ್ಲ ಸಂಪ್ರದಾಯ, ಪದ್ಧತಿಗಳನ್ನು ಚಾಚೂ ತಪ್ಪದೆ ಮುಸ್ಲಿಮರೂ ಪಾಲಿಸಿದ್ದಾರೆ. ದೇವಿಗೆ ಉಡಿ ತುಂಬಿ ಮಂಗಳಾರತಿ ಆದ ನಂತರ ಮುಸ್ಲಿಂ ಸಂಪ್ರದಾಯದಂತೆ ಕಲಮಾ ಪಠಣ ಮಾಡಿದರು.
ಇದನ್ನು ಓದಿದ್ದೀರಾ? ಧಾರವಾಡ | ವಿದ್ಯಾವರ್ಧಕ ಸಂಘಕ್ಕೆ ರಾಜಕೀಯ ವ್ಯಕ್ತಿಗಳ ಪ್ರವೇಶ ಬೇಡ; ಸಾಹಿತಿಗಳೇ ಅಧ್ಯಕ್ಷರಾಗಲಿ: ರಾಯರ
ಜಾತ್ರಾ ಸಂದರ್ಭದಲ್ಲಿ ಮುಸಲ್ಮಾನರು ಮಸೀದಿಗೆ ಬಣ್ಣ ಹಚ್ಚುತ್ತಾರೆ. ಮತ್ತು ತಮ್ಮ ಬಂಧು ಬಳಗವನ್ನು ಜಾತ್ರೆಗೆ ಆಹ್ವಾನಿಸುತ್ತಾರೆ. ಹೊನ್ನಾಟದ ವೇಳೆ ಗ್ರಾಮದ ಜುಮ್ಮಾ ಮಸೀದಿ ಎದುರು 200ಕ್ಕೂ ಹೆಚ್ಚು ಮುಸ್ಲಿಮರು ಜಮಾಯಿಸಿದ್ದರು. ನಂತರ ದೇವಿಯರ ಹೊತ್ತು ಗ್ರಾಮದ ಮುಖ್ಯ ಬೀದಿಯಲ್ಲಿ ಡೊಳ್ಳು ಬಾರಿಸುತ್ತ, ದೇವಿಯ ಉಡಿ ತುಂಬುವ ಸಾಮಗ್ರಿ ತೆಗೆದುಕೊಂಡು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿದರು.