ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮುಂಗಾರಿನ ನಾಲ್ಕು ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಸುರಿದ ಮುಂಗಾರು ಮಳೆಯಿಂದ ಹೆಚ್ಚು ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಮುಂಗಾರಿನಂತೆ, ಅಕ್ಟೋಬರ್ ಮಳೆಯು ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡಿದೆ.
ರಾಜ್ಯದಲ್ಲಿ ಹಿಂಗಾರಿನ ಅಕ್ಟೋಬರ್ ತಿಂಗಳೊಂದರಲ್ಲಿಯೇ ಶೇ.66ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ರಾಜ್ಯದಲ್ಲಿ ಬಹುತೇಕ ಬೆಳೆಹಾನಿ ಉಂಟಾದ ವರದಿಯಿದೆ. ಈ ಹಿನ್ನೆಲೆಯಲ್ಲಿ ಜಂಟಿ ಬೆಳೆಸಮೀಕ್ಷೆ ನಡೆಸಿ, ಬೆಳೆಹಾನಿಯಾದ ರೈತರಿಗೆ ಡಿಬಿಟಿ ಮೂಲಕ ಬೆಳೆ ಪರಿಹಾರ ಒದಗಿಸುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೂ ಕೂಡಾ ಭರವಸೆ ನೀಡಿದ್ದಾರೆ.
ಮುಂಗಾರು ಮಳೆಯ ನಾಲ್ಕು ತಿಂಗಳಲ್ಲಿ 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಮಳೆಯಿಂದ ಹಾನಿಗೊಳಗಾಗಿದ್ದರೆ, 7,376.81 ಹೆಕ್ಟೇರ್ ತೋಟಗಾರಿಕೆ ಬೆಳೆಗಳೂ ಕೂಡಾ ಹಾನಿಗೊಳಗಾಗಿವೆ. ಅಕ್ಟೋಬರ್‌ನಲ್ಲಿ 16,842.82 ಹೆಕ್ಟೇರ್ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಗೊಳಗಾದರೆ, 93,902 ಹೆಕ್ಟೇರ್‌ನಲ್ಲಿ ಕೃಷಿ ಬೆಳೆಗಳೂ ಕೂಡಾ ಜಲಾವೃತವಾಗಿರುವುದಾಗಿ ರಾಜ್ಯ ಕಂದಾಯ ಇಲಾಖೆಯಿಂದ ಮಾಹಿತಿ ತಿಳಿದುಬಂದಿದೆ.

ಅಕ್ಟೋಬರ್ ಮಳೆಯಲ್ಲಿ ಒಟ್ಟು 152 ಪ್ರಾಣಿಗಳು ಮೃತಪಟ್ಟಿದ್ದು, 143 ಮನೆಗಳಿಗೆ ಸಂಪೂರ್ಣ ಹಾನಿಯಾಗಿರುವುದು ಸೇರಿದಂತೆ 4,614 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಧಾರವಾಡ, ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳು ಈ ಐದು ತಿಂಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಹೆಚ್ಚು ಹಾನಿಗೊಳಗಾದ ಮೂರು ಜಿಲ್ಲೆಗಳಾಗಿವೆ.

ಧಾರವಾಡ ಕಂದಾಯ ಇಲಾಖೆ ಸಿಬ್ಬಂದಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಬಹುತೇಕ ಬೆಳೆಹಾನಿಯಾಗಿದೆ. 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿದ್ದರೆ, 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿಯಾಗಿದ್ದು, ಒಟ್ಟಾರೆಯಾಗಿ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ” ಎಂದು ಮಾಹಿತಿ ನೀಡಿದರು.
“ಪ್ರಾಥಮಿಕ ತನಿಖೆಯಲ್ಲಿ 467 ಮನೆಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಇದೀಗ ಹೆಚ್ಚಿನ ಸರ್ವೆ ಕೈಗೊಳ್ಳಲಾಗಿದೆ. ಬಳಿಕ ಯಾವ್ಯಾವ ಮನೆಗಳು ಎಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ ಎಂಬುದನ್ನು ತಿಳಿಯಲಿದ್ದೇವೆ. ಸದ್ಯಕ್ಕೆ 467 ಮನೆಗಳು ಹಾನಿಗೊಳಗಾಗಿರುವುದು ತಿಳಿದುಬಂದಿದೆ” ಎಂದರು.

“ಭಾರೀ ಮಳೆಗೆ ಮನೆ ಬಿದ್ದ ಪರಿಣಾಮ ಒಂದು ಮಾನವ ಜೀವಹಾನಿಯಾಗಿದೆ. ಮನೆ ಬಿದ್ದ ಬಳಿಕ ಅಸ್ವಸ್ಥರಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಜೂನ್‌ನಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಸಿಡಿಲು ಬಡಿದು ತಲಾ ಒಂದೊಂದು ಸಾವು ಪ್ರಕರಣ ಉಂಟಾಗಿದೆ” ಎಂದರು.
“ಅಕ್ಟೋಬರ್ ತಿಂಗಳ ಮಳೆಗೆ 7 ದೊಡ್ಡ ಜಾನುವಾರು(ಆಕಳು, ಎಮ್ಮೆ)ಗಳು ಮೃತಪಟ್ಟಿದ್ದು, 3 ಸಣ್ಣ ಜಾನುವಾರು(ಕುರಿ, ಮೇಕೆ)ಗಳು ಮೃತಪಟ್ಟಿವೆ” ಎಂದು ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.

ಅಕ್ಟೋಬರ್ 1 ಮತ್ತು 26ರ ನಡುವೆ, ಕೇವಲ ನಾಲ್ಕು ಜಿಲ್ಲೆಗಳಲ್ಲಿ(ಬೀದರ್, ಯಾದಗಿರಿ, ವಿಜಯಪುರ ಮತ್ತು ರಾಯಚೂರು) ಮಾತ್ರ ಕಡಿಮೆ ಮಳೆಯಾಗಿದೆ. ದಾವಣಗೆರೆಯಲ್ಲಿ +163% ಹೆಚ್ಚುವರಿ ಮಳೆಯಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಮಳೆಯ ದಾಖಲೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳ ಹಿಂಗಾರು ಮಳೆ ಅಧಿಕವಾಗಿ ಸುರಿದಿದ್ದು, ಪ್ರಾಥಮಿಕವಾಗಿ ಬೆಳೆನಷ್ಟವನ್ನು ಅಂದಾಜಿಸಲಾಗಿದೆ. ಆದರೆ ಇನ್ನೂ ಹೆಚ್ಚಿನ ಬೆಳೆ ನಾಶವಾಗಿರುವ ಮಾಹಿತಿಯಿದೆ. ಹಿಂಗಾರು ಮಳೆಯಲ್ಲಿ ಒಂಬತ್ತು ಮಂದಿ ಸಿಡಿಲು ಬಡಿದು ಮರಣ ಹೊಂದಿದ್ದರೆ, ಮನೆ ಕುಸಿತದಿಂದ 6 ಮಂದಿ ಮೃತಪಟ್ಟಿದ್ದು, 3 ರಿಂದ 4 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಒಟ್ಟು 21 ಜನರ ಪ್ರಾಣಹಾನಿಯಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕೊಡಗು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತ; ಮೇರಿಯಂಡ ಸಂಕೇತ್ ಪೂವಯ್ಯ ಅಸಮಾಧಾನ
“ಅಕ್ಟೋಬರ್ ಮಳೆಯಿಂದ ರಾಜ್ಯಾದ್ಯಂತ ಭಾರೀ ಬೆಳೆಹಾನಿಯಾಗಿದೆ. ಕಳೆದ ವರ್ಷ ರೈತರು ಬರಗಾಲದಿಂದ ತೊಂದರೆ ಅನುಭವಿಸಿದ್ದರೆ, ಈ ವರ್ಷ ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸಿದ್ದಾರೆ. ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
“ನಷ್ಟ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ಅಡಿಯಲ್ಲಿ ನೀಡಲಾಗುವ ಪರಿಹಾರ ಮೊತ್ತವನ್ನು ಪರಿಷ್ಕರಿಸಬೇಕು” ಎಂದು ಒತ್ತಾಯಿಸಿದ್ದಾರೆ.