ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ ಹಾಗೂ ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್, ಜಿಲ್ಲಾ ಆಸ್ಪತ್ರೆ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ 2024 ಅಂಗವಾಗಿ ನವೆಂಬರ್ 14ರಂದು ಧಾರವಾಡ ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್, ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ ತಪಾಸಣೆಯನ್ನು ಹಮ್ಮಿಕೊಂಡಿದ್ದರು.
ಜನರಲ್ ಫಿಜಿಸಿಯನ್ ಡಾ. ನಿವೇದಿತಾ ಪಾಟೀಲ ಮಾತನಾಡಿ, ಬದಲಾದ ಜೀವನ ಶೈಲಿ, ಅನಿಯಂತ್ರಿತ ಆಹಾರ ಕ್ರಮ, ದೈಹಿಕ ಶ್ರಮ ಇಲ್ಲದಿರುವುದು ಮಧುಮೇಹ ವಿಶ್ವದಾದ್ಯಂತ ಹೆಚ್ಚಾಗಲು ಕಾರಣವಾಗಿವೆ ಎಂದರು.
ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮಾಧಿಕಾರಿ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಪರಶುರಾಮ ಎಫ. ಕೆ ಮಾತನಾಡಿ, 30 ವರ್ಷ ಮೇಲ್ಪಟ್ಟ ಎಲ್ಲರು ಮಧುಮೇಹ ತಪಾಸಣೆಗೆ ಒಳಗಾಗಬೇಕು. ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಎಲ್ಲಡೆ ಮಧುಮೇಹ ತಪಾಸಣೆ ಲಭ್ಯವಿದ್ದು, ಸಾರ್ವಜನಿಕರು ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಮಧುಮೇಹ ಖಚಿತಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಗಾಬಿ ಮಾತನಾಡಿ, ದೈಹಿಕ ಶ್ರಮವಿಲ್ಲದಿರುವುದು, ಧೂಮಪಾನ, ಮದ್ಯಪಾನ, ಒತ್ತಡದ ಜೀವನಶೈಲಿಯಿಂದ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳಿಂದ ಮಧುಮೇಹವನ್ನು ದೂರವಿಡಬಹುದು. ಮಧುಮೇಹವಿದ್ದಲ್ಲಿ ವೈದ್ಯಕೀಯ ಸಲಹೆ ಅನುಸಾರವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ನಿಯಮಿತ ಆಹಾರ ಸೇವನೆ ಮತ್ತು ದಿನನಿತ್ಯ ಮುಂಜಾನೆ ನಡಿಗೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಮುಖ್ಯ ಚಿಕಿತ್ಸಕ ಡಾ. ಸ್ವಾಮಿ, ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್‍ನ ಜನರಲ್ ಫಿಜಿಸಿಯನ್ ಡಾ. ವಾಸಂತಿ ಜೀರಗಳ, ಎನ್.ಪಿ.ಎಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ವೈದ್ಯಾಧಿಕಾರಿಗಳು, ಹಿರಿಯ ಶುಶ್ರೂಷಕ ಅಧಿಕಾರಿಗಳು, ಜಿಲ್ಲಾ ಎನ್.ಸಿ.ಡಿ ಘಟಕ ಮತ್ತು ಎನ್.ಸಿಡಿ ಕ್ಲಿನಿಕ್ ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.