ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆ ಹೆಚ್ಚಳ ಹಾಗೂ ಬಸ್ ದರ ಏರಿಕೆಯ ಪ್ರಸ್ತಾವನೆ ಖಂಡಿಸಿ ಧಾರವಾಡ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್(ಎಸ್‌ಯುಸಿಐ) ಕಾರ್ಯಕರ್ತರು ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
“ಚುನಾವಣೆಗಳು ಮುಗಿಯುತ್ತಿದ್ದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರ್‌ಗೆ ತಲಾ ₹3 ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಜತೆಗೆ ಬಸ್ ದರ ಏರಿಕೆಯ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು” ಎಂದು ಅಗ್ರಹಿಸಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ ಮಾತನಾಡಿ, “ಬೆಲೆ ಏರಿಕೆಯಿಂದ ರಾಜ್ಯ ಖಜಾನೆಗೆ ಈ ಆರ್ಥಿಕ ವರ್ಷದಲ್ಲಿ ಸುಮಾರು ₹3000 ಕೋಟಿ ಹೆಚ್ಚುವರಿ ತೆರಿಗೆ ವಸೂಲಿಯಾಗಲಿದೆ. ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಏರಿಕೆಯಾಗಿ ಬೆಲೆ ಏರಿಕೆಯ ಮೇಲೆ ಸರಣಿ ಪರಿಣಾಮ ಉಂಟಾಗಲಿದೆ. ತರಕಾರಿ, ದವಸ-ಧಾನ್ಯಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ” ಎಂದರು.
“ಈಗಾಗಲೇ ಪ್ರತಿ ಲೀಟರ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ತೆರಿಗೆಯೇ ಇದೆ. ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಕೇಂದ್ರ ಬಿಜೆಪಿ ಸರ್ಕಾರವು ಮತದಾರರನ್ನು ಓಲೈಸಲು ₹2 ಕಡಿತ ಮಾಡಿತ್ತು. ರಷ್ಯಾ-ಉಕ್ರೇನ್ ಯುದ್ಧದ ಲಾಭ ಪಡೆದು ಭಾರತ ಸರ್ಕಾರವು ಜಾಗತಿಕ ದರಕ್ಕಿಂತ ಸುಮಾರು ಶೇ.35ರಷ್ಟು ಕಡಿಮೆಗೆ ಕಚ್ಚಾ ತೈಲವನ್ನು ಖರೀದಿ ಮಾಡಿದರೂ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ” ಎಂದು ಆರೋಪಿಸಿದರು.
“ಲಕ್ಷಾಂತರ ಕೋಟಿ ರೂಪಾಯಿಗಳನ್ನು ಭಾರತದ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ. ಇನ್ನೊಂದೆಡೆ ಒಂದು ದೇಶ- ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್‌ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆಗಳನ್ನು ಹೇರುತ್ತಿವೆ. ಅದೇ ದಾರಿಯಲ್ಲಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡ ಈ ಜನವಿರೋಧಿ ತೀರ್ಮಾನವನ್ನು ಕೈಗೊಂಡಿದೆ. ಬೆಲೆ ಏರಿಕೆಯ ಕುರಿತು ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಈ ಕ್ರಮವು ಜನರಿಗೆ ಮಾಡಿದ ವಂಚನೆಯಾಗಿದೆ. ಆದ್ದರಿಂದ ತೆರಿಗೆ ಹೆಚ್ಚಳವನ್ನು ತಕ್ಷಣವೇ ವಾಪಸ್ ಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಚ್ಚಿರುವ ಸರ್ಕಾರಿ ಶಾಲೆಗಳ ಪುನರಾರಂಭಕ್ಕೆ ಒತ್ತಾಯ
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಶರಣಬಸವ ಗೋನವಾರ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ, ಜಿಲ್ಲಾ ಸಮಿತಿ ಸದಸ್ಯ ಭುವನಾ ಬಳ್ಳಾರಿ, ದೀಪಾ ಧಾರವಾಡ, ಮಧುಲತಾ ಗೌಡರ, ಭವಾನಿಶಂಕರ್ ಎಸ್ ಗೌಡ ಸೇರಿದಂತೆ ಸದಸ್ಯರು, ಕಾರ್ಯಕರ್ತರು, ವಿವಿಧ ಬಡಾವಣೆಗಳ, ಹಳ್ಳಿಗಳ ನಾಗರಿಕರು ಪ್ರತಿಭಟನೆಯಲ್ಲಿ ಇದ್ದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಲಬುರಗಿ ಜಿಲ್ಲೆಯಲ್ಲಿಯೂ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ ನಾಯಕಿ ವಿ ನಾಗಮ್ಮಾಳ್ ಮಾತನಾಡಿ, “ಬಿಜೆಪಿ ಸರ್ಕಾರದ ದಾರಿಯಲ್ಲಿ ಈಗ ರಾಜ್ಯ ಕಾಂಗ್ರೆಸ್ ಸರ್ಕಾರವೂ ಜನವಿರೋಧಿ ತಾರತಮ್ಯ ಕೈಗೊಂಡಿದೆ. ಬೆಲೆ ಏರಿಕೆಯ ಕುರಿತು ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಈ ಕ್ರಮ ತಮಗೆ ಮಾಡಿದ ವಂಚನೆಯೆಂದು ಜನತೆ ಭಾವಿಸುತ್ತಾರೆ. ಆದ್ದರಿಂದ ಜನರ ಮೇಲಿನ ಈ ಬೆಲೆ ಏರಿಕೆಯ ಹೊಡೆತವನ್ನು ಕೂಡಲೇ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
