ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ನಡೆಸುವ ಮನೋಚೈತನ್ಯ ಕಾರ್ಯಕ್ರಮದಲ್ಲಿ ಉಚಿತ ಚಿಕಿತ್ಸೆ ಶಿಬಿರವನ್ನು ಎಲ್ಲ ತಾಲೂಕು ಆಸ್ಪತ್ರೆಗಳು ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಔಷಧಿ ಸೌಲಭ್ಯವೂ ಇದೆ ಎಂದು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಮಾನಸಿಕ ಆರೋಗ್ಯ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮಾಡಿದ ವೇಳೆ ಮಾತನಾಡಿದರು.
“ಟೆಲಿಮನಸ್ ಸೇವೆಯ ಸೌಲಭ್ಯ ಹಾಗೂ ಸಹಾಯವಾಣಿ 1800-89-14416 ಈ ಟೋಲ್ ಪ್ರೀ ನಂಬರ್ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಎಸ್ ಬಿಕಳಸೂರಮಠ ಅವರು ಈ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
ಮನೋವೈದ್ಯೆ ಡಾ. ವೈಶಾಲಿ ಎನ್ ಹೆಗಡೆ ಅವರು ಮಾನಸಿಕ ಆರೋಗ್ಯ ಚಟುವಟಿಕೆಗಳ ಕುರಿತಾಗಿ ವರದಿಯನ್ನು ನೀಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ, ಚಿಕಿತ್ಸೆ ಸೌಲಭ್ಯದ ಬಗ್ಗೆ ಹಾಗೂ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವ್ಯಸನಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ: ಡಾ. ಶಶಿ ಪಾಟೀಲ
ವಿಶ್ವ ಸಂಸ್ಥೆಯ ಜಿನಿವಾದ ಮೆಂಟಲ್ ಹೆಲ್ತ್ ಏಮರ್ಜೆನ್ಸಿ ಘಟಕದ ಕ್ಲಿನಿಕಲ್ ಸೈಕಲಾಜಿಸ್ಟ್ ಡಾ. ಜೇಮ್ಸ್ ಅಂಡರಹಿಲ್, ಸೈಕಿಯಾಟ್ರಿಸ್ಟ್ ಡಾ. ಸುದಿಪ್ತೂಚಟರ್ಜಿ ಅವರು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕಾರ್ಯ ಚಟುವಟಿಕೆ ಹಾಗೂ ಟೆಲಿಮನಸ್ ಉಚಿತ ಸಹಾಯವಾಣಿಯ ಉಪಯುಕ್ತತೆಯ ಕುರಿತಾಗಿ ಮಾಹಿತಿ ಪಡೆದರು.
ವಿಶ್ವ ಆರೋಗ್ಯ ಸಂಸ್ಥೆಯ ತಂಡದವರೂಂದಿಗೆ ನಿಮ್ಹಾನ್ಸ್ ಮನೋವೈದ್ಯರು ಡಾ. ಸುರೇಶ ಹಾಗೂ ಡಾ. ಮಂಜುನಾಥ ಹಾಗೂ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಡಾ. ಸುಧೀಂದ್ರ ಹುದ್ದಾರ, ಮನೋವೈದ್ಯ ಡಾ. ಶ್ರೀನಿವಾಸ, ಡಿಎಂಎಚ್‌ಪಿಯ ಎಲ್ಲ ಸಿಬ್ಬಂದಿ ಇದ್ದರು.