ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮ ಪಂಚಾಯತಿ ಎದುರು ನರೇಗಾ ಕೆಲಸಕ್ಕಾಗಿ ಗ್ರಾಮೀಣ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕೆಲಸ ಕೊಡಿ, ಕೂಲಿ ಕೊಡಿ, ಇಲ್ಲದಿದ್ದರೆ ಖುರ್ಚಿ ಬಿಡಿ ಎಂದು ಘೋಷಣೆ ಕೂಗಿದ ಕೂಲಿ ಕಾರ್ಮಿಕರು ಗ್ರಾಮೀಣ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಮತ್ತು ಪಂಚಾಯತಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೂಲಿ ಕಾರ್ಮಿಕ ಮಹಿಳೆಯರು ಮಾತನಾಡಿ, ಕೆಲಸ ಕೇಳಿಕೊಂಡು ಪಂಚಾಯಿತಿ ಕಡೆಗೆ ಬಂದರೆ ಪಂಚಾಯಿತಿಯನ್ನು ಬಂದ್ ಮಾಡುತ್ತಾರೆ. ಪಿಡಿಒ ನಾವು ಬಂದ ತಕ್ಷಣ ಎದ್ದು ಹೋಗುತ್ತಾರೆ ಮತ್ತು ಎರಡು ಮೂರು ದಿನದ ಎನ್ಎಂಆರ್ ಮಾತ್ರ ಹಾಕಿಕೊಡುತ್ತಾರೆ. ವರ್ಷಕ್ಕೆ 100 ಅಥವಾ 150 ಹಾಜರಿ ಕೊಡದೆ 40, 50 ಹಾಜರಿಗಳನ್ನು ಮಾತ್ರ ಕೊಡುತ್ತಾರೆ ಎಂದು ಆರೋಪಿಸಿದರು. ಹೊಲಗಳು ಇಲ್ಲದ ನಾವುಗಳು ಬಡವರಾಗಿದ್ದು ನರೇಗಾ ಕೆಲಸವನ್ನು ನಂಬಿ ಕೊಂಡಿದ್ದೇವೆ. ನಮಗೆ ನೂರು ದಿನದ ಕೆಲಸ ಕೊಟ್ಟರೆ ಸಾಕು, ನಮ್ಮ ಕಡೆಯಿಂದ ಯಾವ ತಕರಾರೂ ತೆಗೆಯುವುದಿಲ್ಲ. ಕಳೆದ ಆರು ತಿಂಗಳಿಂದ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗಲಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ.ಎಚ್.ಮನಿಯಾರ್ ಮಾತನಾಡಿ, ಸುಮಾರು ದಿನಕ್ಕೆ 800 ಕೂಲಿ ಕಾರ್ಮಿಕರಿಗೆ ಕೆಲಸವನ್ನು ಕೊಡಲಾಗುತ್ತದೆ. ಈ ವರ್ಷ ಅತಿಯಾದ ಮಳೆಯಿಂದಾಗಿ ದೊಡ್ಡ ಕೆರೆಯಲ್ಲಿ ನೀರು ತುಂಬಿರುವ ಕಾರಣದಿಂದ ಕೆಲಸವನ್ನು ಕಡಿಮೆ ಪ್ರಮಾಣದಲ್ಲಿ ಕೊಡಲಾಗಿದೆ. ಕೆಲಸ ಕೇಳಿಕೊಂಡು ಬಂದ 6 ನಂಬರಿನ ಅರ್ಜಿಗಳನ್ನು ಅರಣ್ಯ ಇಲಾಖೆ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ತಲುಪಿಸಲಾಗಿದೆ. ಕೆರೆ ತುಂಬಿರುವ ಕಾರಣ ಬೇರೆ ಕೆಲಸಕ್ಕೆ ಕ್ರಿಯಾಯೋಜನೆಯನ್ನು ಈಗಾಗಲೇ ತಾಲೂಕು ಪಂಚಾಯಿತಿಗೆ ಕಳಿಸಿದ್ದೇವೆ. ಇನ್ನುಳಿದ ಕಾಮಗಾರಿಗಳನ್ನು ನರೇಗಾ ಯೋಜನೆ ಅಡಿಯಲ್ಲಿ ಸೃಷ್ಟಿ ಮಾಡಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲಾಗುವುದು ಎಂದು ಹೇಳಿದರು.
ಈ ವರದಿ ಓದಿದ್ದೀರಾ? ಮಂಗಳೂರು | ಡಿಸೆಂಬರ್ 21ರಿಂದ ಜನವರಿ 19 ರವರೆಗೆ ಮತ್ತೊಮ್ಮೆ’ ಕರಾವಳಿ ಉತ್ಸವ’
ಪ್ರತಿಭಟನೆಯಲ್ಲಿ ಸಂಗಮೇಶ್ವರ ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯರು ಭಾಗವಹಿಸಿದ್ದರು.