ನಾಗರಿಕತೆ ಬೆಳೆದಂತೆ ದೇಶವು ಅಭಿವೃದ್ಧಿ ಹೊಂದುತ್ತ ಹೋಗುತ್ತದೆ. ಸಮಾಜ ಬದಲಾವಣೆಯ ಜೊತೆಗೆ ಸಮಾದಲ್ಲಿನ ವಾತಾವರಣವು ಬದಲಾಗಬೇಕಾಗುತ್ತದೆ. ಆದರೆ, ಜಗತ್ತು ಏಕಪಕ್ಷವಾಗಿ ಮುಂದುವರೆಯಲು ಆರಂಭಿಸಿದಾಗ ಬಹುಸಂಖ್ಯೆಯ ಜನರು ಅದರಿಂದ ಹೊರಗುಳಿಯುತ್ತಾರೆ. ಈಗ ಇರುವುದೂ ಅಂತದ್ದೇ ಅಭಿವೃದ್ಧಿ. ದೇಶ, ರಾಜ್ಯ, ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಇಂದಿಗೂ ಹಲವಾರು ಜನರು ಕೊಳಗೇರಿಗಳಲ್ಲಿ ಬದುಕು ದೂಡುತ್ತಿದ್ದಾರೆ. ಅವರಿಗೆ ಈ ಏಕಪಕ್ಷೀಯ ಅಭಿವೃದ್ಧಿಯಿಂದ ಬಿಡಿಗಾಸಿನ ಪ್ರಯೋಜನವೂ ಆಗಿಲ್ಲ. ಅಧಿಕಾರ ಹಿಡಿದ ಜನಪ್ರತಿನಿಧಿಗಳೂ ಕೊಳಗೇರಿಗಳ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂಬುದು ವಾಸ್ತವ ಸಂಗತಿ.
ವಿದ್ಯಾಕಾಶಿ ಎಂದುಕರೆಯಿಸಿಕೊಳ್ಳುವ ಧಾರವಾಡದ ಹೃದಯಭಾಗಕ್ಕೆ ಹತ್ತಿರವಾದ ಮೃತ್ಯುಂಜಯ ನಗರದ ಚುರುಮುರಿ ಬಟ್ಟಿ ಮತ್ತು ಜೋಪಡ ಪಟ್ಟಿ ಈ ಎರಡೂ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಯಾವುದೇ ಮೂಲ ಭೂತ ಸೌಕರ್ಯಗಳಿಲ್ಲ. ನಾವು ಎಲ್ಲರಂತೆ ಮತಹಾಕಿದವರು. ಮತ ಹಾಕಿಸಿಕೊಳ್ಳುವಾಗ ಜನಪ್ರತಿನಿಧಿಗಳು ಮನೆಯ ಬಾಗಿಲಿಗೆ ಬಂದು ನಿಲ್ಲುತ್ತಾರೆ. ಆಮೇಲೆ, ನಾವೂ ಇದ್ದೇವೆ ಎಂಬುದನ್ನೇ ಮರೆತುಬಿಡುತ್ತಾರೆ ಎಂದು ಈದಿನ.ಕಾಮ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಅಲ್ಲಿನ ನಿವಾಸಿಗಳು.
“ಸುಮಾರು 50-60 ವರ್ಷಗಳಿಂದ ನಾವೆಲ್ಲ ಇಲ್ಲಿ ವಾಸವಾಗಿದ್ದೇವೆ. ಇಲ್ಲಿ ಸುಮಾರು 40-50 ಕುಟುಂಬಗಳಿವೆ. ಹೊಟ್ಟೆ ಪಾಡಿಗಾಗಿ ಚುರುಮುರಿ(ಮಂಡಕ್ಕಿ) ತಯಾರಿಸುವ ಕಾಯಕವನ್ನು ಮಾಡುತ್ತೇವೆ. ಮಳೆ ಬಂದರೆ ನಮ್ಮ ಬದುಕೇ ದುಸ್ಥರವಾಗುತ್ತದೆ. ಈ ಹಿಂದೆ ಒಂದು ಸಲ ವಿಪರೀತ ಮಳೆಯಾಗಿ ಒಳಚರಂಡಿಗಳು ಸರಿಯಿಲ್ಲದೆ, ನಮ್ಮ ವಾಸ ಪ್ರದೇಶದಲ್ಲಿ ನೀರು ತುಂಬಿಕೊಂಡಿತ್ತು. ಕೊಳಚೆಯನ್ನು ಬರಿಗೈನಲ್ಲಿ ಸ್ವಚ್ಛಗೊಳಿಸಿಕೊಂಡಿದ್ದೆವು. ನಮ್ಮ ಪರಿಸ್ಥಿತಿ ಬಗ್ಗೆ ಜನ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ” ಎನ್ನುತ್ತಾರೆ ಸ್ಥಳೀಯ ನಿವಾಸಿ ದಾವಲಸಾಬ ಉಳ್ಳಟ್ಟಿ.

ಮುಖ್ಯವಾಗಿ ಇಲ್ಲಿನ ಮಹಿಳೆಯರು ಸೂಕ್ತ ಶೌಚಾಲಯದ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಇರುವ ಒಂದು ಸಾರ್ವಜನಿಕ ಶೌಚಾಲಯವು ದಿನವೂ ಬಳಕೆಗೆ ದೊರೆಯುತ್ತಿಲ್ಲ. ಅದನ್ನು ಬೆಳಿಗ್ಗೆ ಹತ್ತು ಗಂಟೆಯವರೆಗೆ ಮಾತ್ರ ತೆರೆದು ನಂತರ ಬಂದ್ ಮಾಡಲಾಗುತ್ತದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಬಹಳ ತೊಂದರೆ ಆಗುತ್ತಿದೆ. ದಿನದ 24 ಗಂಟೆಗಳ ಕಾಲ ಶೌಚಾಲಯವನ್ನು ತೆರೆಯಬೇಕು ಎಂಬುದು ಇಲ್ಲಿನ ಮಹಿಳೆಯರ ಆಗ್ರಹ.
ಇನ್ನು ಒಳಚರಂಡಿಗಳ ಪರಿಸ್ಥಿತಿಯಂತೂ ಹೇಳಲಾಗದ ಸ್ಥಿತಿಯಲ್ಲಿವೆ. ಅವುಗಳು ಕಟ್ಟಿಕೊಂಡಿದ್ದು, ಕೊಳಚೆ ನೀರು ಮನೆಗಳ ಮುಂದೆಯೇ ಹರಿಯುತ್ತದೆ. ಮಳೆ ಬಂದಾಗ ಮನೆಗಳಿಗೂ ನುಗ್ಗುತ್ತದೆ. ಇದರಿಂದಾಗಿ ಅಡುಗೆ ಮಾಡುವಾಗ, ಊಟ ಮಾಡುವಾಡ ಈ ಕೊಳಚೆ ನೀರಿನ ವಾಸನೆಯಿಂದ ಮನೆಯಲ್ಲಿ ಕ್ಷಣ ಕಾಲವೂ ಕೂಡಲು ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿದ್ದೇವೆ. ಮಹಾನಗರ ಪಾಲಿಕೆಯವರು ಬರುತ್ತಾರೆ ಸಮಸ್ಯೆಗಳನ್ನು ತಿಳಿದು ಹೋಗುತ್ತಾರೆ. ಅದರಿಂದ ಯಾವುದೇ ಪ್ರಯೋಜನವೂ ಆಗಿಲ್ಲ. ನಾವೆಲ್ಲ ಮುಸಲ್ಮಾನರು ಎಂಬ ಕಾರಣಕ್ಕೆ ನಮ್ಮ ಕಷ್ಟಗಳನ್ನು ಯಾರೂ ಕೇಳುತ್ತಿಲ್ಲವೇನೊ ಎನಿಸುತ್ತಿದೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂತಪ್ಪನವರ ಓಣಿಯಲ್ಲಿ ವಾಸಿಸುತ್ತಿರುವ ಜನರದ್ದೂ ಇಂತದ್ದೇ ಪರಿಸ್ಥಿತಿ. ದುರ್ಗಮುರಗಿ (ಸಿಂದೋಳು) ಸಮುದಾಯದ ಜನರು ವಲಸೆ ಬಂದು ಸರಿಸುಮಾರು 30 ವರ್ಷಗಳಿಂದ ಇಲ್ಲಿ ಜೋಪಡಿ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿ ಒಟ್ಟು 150 ಕುಟುಂಬಗಳು ವಾಸವಾಗಿವೆ. ತಮ್ಮ ಕುಲದೇವತೆಯಾದ ಮಾರೆಮ್ಮ ದೇವಿಯನ್ನು ಹೊತ್ತು ಊರೂರು ಅಲೆದು, ಭಿಕ್ಷಾಟನೆ ಮಾಡುವುದೇ ಇಲ್ಲಿನ ಜನರ ಮೂಲ ವೃತ್ತಿಯಾಗಿದೆ.
ಇಲ್ಲಿನ ಸುಮಾರು 10-15 ಕುಟುಂಬಗಳು ಸ್ನಾನಕ್ಕಾಗಿ ಒಂದೇ ಬಚ್ಚಲು ಮನೆಯನ್ನು ಉಪಯೋಗಿಸುತ್ತಾರೆ. ಮಳೆ ಬಂದರೆ ಮೊಣಕಾಲು ತನಕ ನೀರು ತುಂಬುತ್ತದೆ. ಇವರು ಶಹರಕ್ಕೆ ಹತ್ತಿರವಾಗಿ ವಾಸವಿದ್ದರೂ ಗುಡಿಸಲುಗಳಿಂದ ಮುಕ್ತಿಯಿಲ್ಲ. ಮನೆಗಳಲ್ಲಿ ಯಾರಾದರೂ ಮರಣ ಹೊಂದಿದರೆ ಅವರ ಮೃತದೇಹವನ್ನು ಕೆಲಕಾಲ ಇಟ್ಟುಕೊಳ್ಳಲೂ ಜಾಗವಿಲ್ಲ. ನಾಲ್ಕು ಜನ ನಿಲ್ಲಲೂ ಜಾಗವಿಲ್ಲದ ಪರಿಸ್ಥಿತಿಯಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.
“ನಾವು ಹೊಟ್ಟೆಪಾಡಿಗಾಗಿ ಊರೂರು ತಿರುಗಲು ಹೋದಾಗ ನಮ್ಮ ಗುಡಿಸಲುಗಳನ್ನು ಬುಲ್ಡೋಜರ್ ಬಂದು ನೆಲಸಮ ಮಾಡಿದರೆ, ಇಲ್ಲಿಂದ ನಮ್ಮನ್ನು ಹೊರ ಹಾಕಿದರೆ ನಾವೆಲ್ಲಿ ಬದುಕಬೇಕು? ನಮಗೆ ನೆಲೆ ಎಲ್ಲಿದೆ? ಎಂಬ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಆಧಾರ್ ಕಾರ್ಡ್, ಮತದಾರ ಚೀಟಿ, ಪಡಿತರ ಚೀಟಿ ಹೊಂದಿರುವ ನಮಗೆ, ನಾವಿರುವ ಜಾಗದ ಹಕ್ಕುಪತ್ರಗಳನ್ನೂ ನೀಡಿಲ್ಲ. ನಮ್ಮ ವಾಸಸ್ಥಳದ ಹಕ್ಕುಪತ್ರಗಳನ್ನು ಸರ್ಕಾರ ನಮಗೆ ನೀಡಬೇಕು” ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ತಮ್ಮ ಸಮಸ್ಯೆಯ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಮುದಾಯದ ಮುಖಂಡ ಜಂಬಯ್ಯ ದುರ್ಗಮುರಗಿ, “ನಾವು ನಮ್ಮ ಹಕ್ಕುಪತ್ರಗಳಿಗಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಜೀವ ಬಿಡುತ್ತೇವೆಯೇ ಹೊರತು ಜಾಗ ಬಿಡುವುದಿಲ್ಲ. ನಮ್ಮ ಗುಡಿಸಲು ಕಿತ್ತು ಹಾಕಲು ಯಾರಾದರೂ ಬಂದರೆ, ರಸ್ತೆಯಲ್ಲಿಯೇ ಅಡ್ಡವಾಗಿ ಮಲಗಿ ವಾಹನಗಳಿಗೆ ಸಿಕ್ಕಿ ನಮ್ಮ ಜೀವ ಕಳೆದುಕೊಳ್ಳುತ್ತೇವೆ. ನಮಗೆ ಹಕ್ಕುಪತ್ರ ಒದಗಿಸಲೇಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಈ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಶಾಸಕ ಅಮೃತ ದೇಸಾಯಿ ಅವರು, ‘ನೀವು ನಮಗೆ ಮತ ಹಾಕಿಲ್ಲ. ನಿಮಗೆ ನಾನೇಕೆ ಕೆಲಸ ಮಾಡಿಕೊಡಬೇಕು’ ಎಂದಿದ್ದರು. ಬಿಜೆಪಿ ಶಾಸಕ ಅರವಿಂದ ಬೆಲ್ಲ ಕೂಡಾ ನಮ್ಮ ಕಷ್ಟಗಳಿಗೆ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.
ಇಲ್ಲಿನ ಸಮಸ್ಯೆಗಳ ಕುರಿತು ಈದಿನ.ಕಾಮ್ ಜೊತೆಗೆ ಮಹಾನಗರ ಪಾಲಿಕೆ ಸದಸ್ಯ ದಿಲಶಾದಬೇಗಂ ನದಾಫ್ ಮಾತನಾಡಿ, “ಈ ಎರಡೂ ಸ್ಲಮ್‌ಗಳ ಜನರು ನಮ್ಮೊಂದಿಗೆ ಸರಿಯಾಗಿ ಸಹಕರಿಸಿದರೆ, ನಾವು ಅವರ ಎಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ನಡೆಯುತ್ತೇವೆ. ಚುರುಮುರಿ ಬಟ್ಟಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಜೋಪಡಿಗಳ ಜನರಿಗೆ ಹಕ್ಕುಪತ್ರ ವಿತರಿಸುವತ್ತ ಕಾರ್ಯೋನ್ಮುಖರಾಗುತ್ತೇವೆ” ಎಂದರು.
ಕಾಂಗ್ರೆಸ್ ಯುವ ಮುಖಂಡ ಮೈನುದ್ಧಿನ್ ನದಾಫ್ ಮಾತನಾಡಿ, “ಅಲ್ಲಿ ವಾಸಿಸುತ್ತಿರುವ ಜನ ನಮ್ಮ ಅಕ್ಕ-ತಂಗಿಯರಿದ್ದಂತೆ. ನಾವು ಅವರೊಂದಿಗೆ ನಿರಂತರವಾಗಿ ನಿಲ್ಲುತ್ತೇವೆ. ಅವರ ಸಮಸ್ಯೆಗಳಿಗೆ ಸ್ಪಂದನೆ ನಮ್ಮಿಂದ ನಿರಂತರವಾಗಿದೆ. ಈಗಾಗಲೇ, ಕೆಲವು ಸಮಸ್ಯೆಗಳಿಗೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಪರಿಹಾರ ಹುಡುಕಿ, ತಮ್ಮ ಸ್ವಂತ ಅನುದಾನದಲ್ಲಿ ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಶಾಸಕ ವಿನಯ ಕುಲಕರ್ಣಿ ಅವರೊಂದಿಗೆ ಮಾತನಾಡಿ, ಶಾಸ್ವತ ಪರಿಹಾರ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಹೇಳಿದರು.