ಸಣ್ಣ ಉದ್ಯಮಗಳು ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ ಎಂದು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಪ್ರಾದ್ಯಾಪಕಿ ಡಾ.ಗೀತಾ ಚಿಟಗುಬ್ಬಿ ತಿಳಿಸಿದರು.
ಧಾರವಾಡ ನಗರದ ಅಂಜುಮನ್ ಇಸ್ಲಾಂ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ವ್ಯಾಪಾರ ಅಭಿವೃದ್ಧಿ ಕುರಿತು ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
“ಸಣ್ಣ ಹಿಡುವಳಿದಾರ ರೈತರು ಆರ್ಥಿಕ ಸ್ಥಿತಿಸ್ಥಾಪಕತ್ವ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ನೆರೆಹೊರೆಯವರು ಮತ್ತು ಪರಿಚಯಸ್ಥರಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಣ್ಣ ಪ್ರಮಾಣದ ಉದ್ಯಮಗಳನ್ನು ಪ್ರಾರಂಭಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎನ್ ಎಂ ಮಕಾಂದಾರ ಮಾತನಾಡಿ, “ವಿದ್ಯಾರ್ಥಿಗಳು ಪೋಷಕರ ಅವಲಂಬನೆಯನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಗಳಿಕೆಯ ಪರಿಕಲ್ಪನೆಯನ್ನೂ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಹಕ ಬಳಕೆಯ ರಾಸಾಯನಿಕ ವಸ್ತುಗಳಾದ ಫೀನೈಲ್, ಗ್ಲಾಸ್ ಕ್ಲೀನರ್, ಹ್ಯಾಂಡ್ ವಾಶ್, ರೂಮ್ ಫ್ರೆಶ್ನರ್, ಲಿಕ್ವಿಡ್ ಸೋಪ್ ಉತ್ಪಾದನೆಯನ್ನು ಪ್ರದರ್ಶಿಸಲಾಯಿತು ಮತ್ತು ಅದನ್ನು ತಯಾರಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಕುಮಾರ್ ಅರ್ಬಾಜ್ ಮತ್ತು ಕುಮಾರ್ ಸುದೀಪ್ ಅಂತಿಮ ವರ್ಷದ ಫ್ಯಾಮಿಲಿ ರೆಸೊರ್ಸ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಮಾಹಿತಿ ನೀಡಿ ತಯಾರಿಕಾ ವಿಧಾನಗಳನ್ನು ಡಾ. ಗೀತಾ ಚಿಟಗುಬ್ಬಿ ಅವರ ಮಾರ್ಗದರ್ಶನದಲ್ಲಿ ತಿಳಿಸಿದರು.
ಡಾ. ರಹತುನೀಸಾ, ಚೇರ್ಮನ್, ವಿಮೆನ್ ಎಂಪವರ್‌ಮೆಂಟ್ ಸೆಲ್, ಅತಿಥಿಗಳ ಪರಿಚಯ ಮಾಡಿದರು. ಕುಮಾರ್ ಶೋಯಿಬ್ ಅತ್ತಾರ ಕುರಾನ್ ಪಠಣ ಮಾಡಿದರು, ಕುಮಾರ್ ಪ್ರವೀಣ್ ಲಮಾಣಿ ಶ್ಲೋಕಗಳನ್ನು ಬೋಧಿಸಿದರು, ಪ್ರೊಫೆಸರ್ ಅಸ್ಮಾ ನದಾಫ್ ವಂದಿಸಿದರು ಹಾಗೂ ಕುಮಾರಿ ತೈಯ್ಯಬಾ ಮೊಮೀನ್ ನಿರೂಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಿಲ್ಲಾಸ್ಪತ್ರೆಯಲ್ಲಿ ಮಂಗಗಳ ಕಾಟ, ರೋಗಿಗಳು ಹೈರಾಣು
ಕಾರ್ಯಕ್ರಮದಲ್ಲಿ ಐಕ್ಯೂಎಸ್‌ಸಿ ಕೋಆರ್ಡಿನೇಟರ್ ಎನ್ ಬಿ ನಾಲತವಾಡ, ಪತ್ರಿಕೋದ್ಯಮ ಮುಖ್ಯಸ್ಥ ಡಾ. ಎಸ್ ಎಸ್ ಅಧೋನಿ, ಉಪನ್ಯಾಸಕ ಡಾ.ಎಸ್ ಎಸ್ ಬಳ್ಳಾರಿ, ಡಾ .ಎನ್ ವಿ ಗುದಗನವರ, ಆಸ್ಮಾ ನದಾಫ್, ಮುಬಾರಕ್ ಮುಲ್ಲಾ, ಎಂ.ಆರ್. ನರಗುಂದ್ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.