ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಹಣವನ್ನು ಬಿಡುಗಡೆ ಮಾಡುತ್ತಿದ್ದರೂ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮಕ್ಕಳು ಪರದಾಡುವಂತ ಸ್ಥಿತಿ ಎದುರಾಗಿದೆ.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿಲ್ಲದೆ ಮಕ್ಕಳು ಪ್ರತಿನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಘಟಗಿ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಶಾಲೆ, ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮತ್ತು ಸಕಾರ್ರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ಒಂದು ಸಾವಿರ ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಕಳೆದ ನಾಲ್ಕೈದು ತಿಂಗಳುಗಳಿಂದಲೂ ಇಲ್ಲಿನ ಶಾಲಾ ಮಕ್ಕಳಿಗೆ ಸಮರ್ಪಕವಾಗಿ ಕುಡಿಯಲು ನೀರಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಗಳಲ್ಲಿ ಪಟ್ಟಣ ಪಂಚಾಯಿತಿ ನಳದಿಂದ ನೀರನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ಒಂದೆರೆಡು ದಿನಗಳಲ್ಲಿ ನೀರು ಖಾಲಿಯಾಗುತ್ತದೆ. ಪರಿಣಾಮ ಊಟ ಮಾಡಿದ ಮಕ್ಕಳಿಗೆ ಕುಡಿಯಲು ನೀರಿಲ್ಲದೆ ಮನೆಯಿಂದಲೇ ನೀರು ತರುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬಕ್ರೀದ್ ದಿನ ಮದ್ಯ ಮಾರಾಟ ನಿಷೇಧ; ಜಿಲ್ಲಾಧಿಕಾರಿ ಆದೇಶ
“ಒಂದೊಂದು ದಿನ ನೀರು ಬರದೆ ಶೌಚಾಲಯಕ್ಕೂ ನೀರಿಲ್ಲದೆ ಮಕ್ಕಳು ಪರದಾಡುವಂತಾಗಿದೆ. ಇನ್ನು ಶಾಸಕರು ಮಾದರಿ ಶಾಲಾ ಆವರಣದಲ್ಲಿ ಕೊಳವೆ ಭಾವಿಯನ್ನು ಕೊರೆಸಿ 6 ತಿಂಗಳು ಕಳೆದರೂ ಅದಕ್ಕೆ ವಿದ್ಯುತ್ ಹಾಗೂ ಪೈಪ್‍ಲೈನ್ ಸಂಪರ್ಕವನ್ನೂ ಕಲ್ಪಿಸಿಲ್ಲ. ಈ ಕನೆಕ್ಷನ್ ಕೊಟ್ಟರೆ ತಕ್ಕ ಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿಸಿದಂತಾಗುತ್ತದೆ” ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
“ಮಕ್ಕಳಿಗೆ ಬಂದೊದಗಿರುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೂಡಲೆ ಕ್ರಮಕೈಗೊಳ್ಳಬೇಕು. ಕ್ಷೇತ್ರದ ಸಚಿವ ಸಂತೋಷ್ ಲಾಡ್ ಅವರು ಮಕ್ಕಳ ಭವಿಷ್ಯವನ್ನು ಗಮನಿಸುವುದು ಅಗತ್ಯವಾಗಿದೆ” ಎಂದು ಒತ್ತಾಯಿಸಿದ್ದಾರೆ.