ಧಾರವಾಡದ ಹುರಕಡ್ಲಿ ಅಜ್ಜ ಕಾಲೇಜಿನ ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಸಿಇಟಿ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರ ತೆಗೆಯಿಸಿ ಪರೀಕ್ಷಾ ಕೊಠಡಿಗೆ ಕಳುಹಿದ್ದಾರೆ ಎಂಬ ಆರೋಪದ ಮೇಲೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ತಪಾಸಣೆ ಮಾಡುವಾಗ ಪೊಲೀಸ್ ಸಿಬ್ಬಂದಿಯೊಬ್ಬರು, ಜನಿವಾರ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ವಿದ್ಯಾರ್ಥಿ ನಂದನ್ ಏರಿ ಧರಿಸಿದ್ದ ಜನಿವಾರವನ್ನು ತೆಗೆಸಲಾಯಿತು ಎನ್ನಲಾಗುತ್ತಿದೆ.
ಈ ವೇಳೆ ನಂದನ್ ತಂದೆ ವಿವೇಕ ಮಾತನಾಡಿ, ಪರೀಕ್ಷೆಗೆ ಹೋದಾಗ ಪೊಲೀಸ್ ಸಿಬ್ಬಂದಿಯೊಬ್ಬರು ಆತನ ತಡೆದು ಜನಿವಾರ ತೆಗೆದರೆ ಮಾತ್ರ ಒಳಗೆ ಬಿಡುತ್ತೇನೆ ಎಂದಿದ್ದಾರೆ. ಇದು ಬ್ರಾಹ್ಮಣ ಸಮಾಜಕ್ಕೆ ಮಾಡಿದ ಅಪಮಾನ. ನಾವು ಜನಿವಾರ ತೆಗೆಯುವುದು ಸತ್ತಾಗ ಮಾತ್ರ, ಇನ್ಯಾವುದೇ ಸಮಯದಲ್ಲಿ ನಾವು ತೆಗೆಯಲ್ಲ. ಕೆಲವರು ರುದ್ರಾಕ್ಷಿ, ಶಿವದಾರ ಕೂಡಾ ತೆಗೆದಿದ್ದಾರೆ ಎಂದಿದ್ದಾರೆ.
ಈ ಕುರಿತು ಸಿಸಿ ಕ್ಯಾಮರಾ ಸಾಕ್ಷಿಗಳ ಪರಿಶೀಲನೆ ನಡೆಯುತ್ತಿದೆ. ಆ ವೇಳೆ ಏನು ನಡೆಯಿತು ಎಂಬುದರ ಕುರಿತು ಸೂಕ್ತ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.