ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಲು ಹಲವು ರೀತಿಯ ಶುಲ್ಕ ನಿಗದಿ ಮಾಡಿರುವುದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‌ಯುಸಿಐ, ಕಮ್ಯುನಿಸ್ಟ್)ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಸಂಗ್ರಹಿಸುತ್ತಿರುವ ಎಲ್ಲ ರೀತಿಯ ಶುಲ್ಕ ಹೆಚ್ಚಳವನ್ನು ಕೈ ಬಿಡಬೇಕು ಹಾಗೂ ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಪಕ್ಷದ ಧಾರವಾಡ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ ಜಿಲ್ಲಾಡಳಿತವನ್ನು ಆಗ್ರಹಿಸಿದರು.
“ನಮ್ಮ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ, ಆಹಾರ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಿವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಇಂದು ಪರಿಸ್ಥಿತಿ ಬೇರೆಯದೇ ಇದೆ. ಆಳುವ ಸರ್ಕಾರಗಳ ಜನವಿರೋಧಿ ನೀತಿಗಳಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಶಿಕ್ಷಣ, ಆರೋಗ್ಯದ ಖಾಸಗೀಕರಣ ಜನರ ಬದುಕನ್ನು ಹೈರಾಣಾಗಿಸಿವೆ. ಆರೋಗ್ಯ ಕ್ಷೇತ್ರಕ್ಕೆ ಬಂದರೆ, ಜನರ ಆರೋಗ್ಯ ಸುದಾರಿಸುತ್ತೇವೆಂದು ಬಡಾಯಿ ಕೊಚ್ಚುತ್ತಲೇ ಕೇಂದ್ರ, ರಾಜ್ಯ ಸರ್ಕಾರಗಳು ವರ್ಷದಿಂದ ವರ್ಷಕ್ಕೆ ತಮ್ಮ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರದ ಅನುದಾನ ಕಡಿತಗೊಳಿಸುತ್ತಲೇ ಬಂದಿವೆ” ಎಂದು ಆರೋಪಿಸಿದರು.
“ಸರ್ಕಾರಗಳು ಆರೋಗ್ಯ ಕ್ಷೇತ್ರದ ಖಾಸಗೀಕರಣಕ್ಕೆ ಕುಮ್ಮಕ್ಕು ಕೊಡುತ್ತಲೇ ಬಂದಿವೆ. ಪರಿಣಾಮವಾಗಿ ಬಹುದೊಡ್ಡ ಸಂಖ್ಯೆಯ ಬಡವರು, ಜನಸಾಮಾನ್ಯರು ಸೂಕ್ತ ಆರೋಗ್ಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದೆಲ್ಲದರ ಮಧ್ಯೆ ಪ್ರಸ್ತುತ ರಾಜ್ಯವು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದಿನ ಬರ ಪರಿಸ್ಥಿತಿಯಲ್ಲಿ ಬಡವರು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ರೈತ-ಕೃಷಿ ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ” ಎಂದರು.
“ಧಾರವಾಡ ಜಿಲ್ಲೆಯಲ್ಲಿ ಬಡವರು, ಜನಸಾಮಾನ್ಯರು ತಮ್ಮ ಆರೋಗ್ಯ ಸೌಲಭ್ಯಕ್ಕೆ ಜಿಲ್ಲಾಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದ್ದು, ನೋಂದಣಿ ಮಾಡಿಸಲು, ಹಲವು ಪರೀಕ್ಷೆ ಮಾಡಿಸಲು, ಬಿಲ್ ತುಂಬಲು ಗಂಟೆಗಟ್ಟಲೇ ರೋಗಿಗಳು ಕಾಯಬೇಕಾದ ಪರಿಸ್ಥಿತಿಯಿದೆ. ಶುದ್ದ ಕುಡಿಯುವ ನೀರಿನ ಘಟಕಗಳ ಕೊರತೆಯಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಗನುಗುಣವಾಗಿ ಅವಶ್ಯಕ ವೈದ್ಯರ, ಆರೋಗ್ಯ ಸಿಬ್ಬಂದಿಗಳ, ಲ್ಯಾಬ್ ಟೆಕ್ನೀಶಿಯನ್‌ಗಳ ತೀವ್ರ ಕೊರತೆಯಿದೆ. ರೋಗಿಗಳಿಗನುಗುಣವಾಗಿ ಬೆಡ್‌ಗಳ ತೀವ್ರ ಕೊರತೆಯಿರುವುದರಿಂದ ಕಾರಿಡಾರ್‌ಗಳ ಮೇಲೆಯೇ ಇರಬೇಕಾದ ಪರಿಸ್ಥಿತಿಯಿದೆ. ರೋಗಿಗಳ ಜೊತೆಗೆ ಬಂದಿರುವವರಿಗೆ ವಿಶ್ರಾಂತಿಗೆ ಸೂಕ್ತ ಸ್ಥಳಾವಕಾಶವಿಲ್ಲದಾಗಿದೆ” ಎಂದರು.
“ಆಸ್ಪತ್ರೆಯ ಒಳ ಆವರಣದಲ್ಲಿ ಸಮರ್ಪಕ ರಸ್ತೆಗಳಿಲ್ಲದೇ ಜನರು ತೊಂದರೆ ಅನುಭವಿಸುವಂತಾಗಿದೆ. ಇಂತಹ ಎಲ್ಲ ಕೊರತೆಗಳಿದ್ದರೂ ಜಿಲ್ಲೆಯ ಬಹುಪಾಲು ಜನಸಾಮಾನ್ಯರು, ಬಡವರು ಈ ಜಿಲ್ಲಾಸ್ಪತ್ರೆ ಮೇಲೆಯೇ ಆರೋಗ್ಯ ಸೇವೆಗೆ ಅವಲಂಬಿತರಾಗಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕಾದ ಸರ್ಕಾರ-ಜಿಲ್ಲಾಡಳಿತವು ವ್ಯತಿರಿಕ್ತವಾಗಿ ಜನರ ಮೇಲೆ ಹೆಚ್ಚಿನ ಶುಲ್ಕದ ಹೊರೆ ಹಾಕಿದೆ. ಇದು ಅತ್ಯಂತ ಅಮಾನವೀಯ, ಅಪ್ರಜಾತಾಂತ್ರಿಕ ಹಾಗೂ ಜನವಿರೋಧಿ ಕ್ರಮವಾಗಿದೆ. ಇದು ಬಡವರನ್ನು, ಜನಸಾಮಾನ್ಯರನ್ನು ಆರೋಗ್ಯ ಸೌಲಭ್ಯದಿಂದ ವಂಚಿತರನ್ನಾಗಿದ್ದು, ಬದುಕುವ ಹಕ್ಕನೇ ಕಸಿದುಕೊಂಡಂತಾಗುತ್ತದೆ. ಸರ್ಕಾರದ ಈ ಅತ್ಯಂತ ಜನವಿರೋಧಿ ಕ್ರಮ ಖಂಡನೀಯ” ಎಂದರು.
“ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಇದೀಗ ನೋಂದಣಿ ಶುಲ್ಕ ಏರಿಸಲಾಗಿದ್ದು, ಬಡವರಿಗೆ- ಜನಸಾಮಾನ್ಯರಿಗೆ ಉಚಿತವಾಗಿದ್ದ ಬೆಡ್ ಸೌಲಭ್ಯ, ಎಕ್ಸ್-ರೇ, ರಕ್ತ ಪರೀಕ್ಷೆ ಇನ್ನಿತರ ಪರೀಕ್ಷೆಗಳನ್ನು ಮಾಡಲು ಈಗ ಶೇ. 50ರಷ್ಟು ಶುಲ್ಕವನ್ನು ನಿಗದಿಪಡಿಸಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಎಲ್ಲ ಕಡೆ ಶುಲ್ಕವನ್ನು ಬರಿಸುವುದು ಅನಿವಾರ್ಯವಾಗಿದೆ. ಶುಲ್ಕ ಪಾವತಿ ಮಾಡದಿದ್ದಲ್ಲಿ ಯಾವುದೇ ಪರೀಕ್ಷೆ ಮಾಡಲಾಗುವುದಿಲ್ಲ. ಖಾಸಗಿ ಆಸ್ಪತ್ರೆಯ ರೀತಿಯಲ್ಲಿ ಪ್ರತಿಯೊಂದಕ್ಕೂ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸರ್ಕಾರದ-ಜಿಲ್ಲಾಡಳಿತದ ಈ ಕ್ರಮ ಬಡವರಲ್ಲಿ-ಜನಸಾಮಾನ್ಯರಲ್ಲಿ ತೀವ್ರ ಆತಂಕ ಉಂಟುಮಾಡಿದೆ” ಎಂದು ಹೇಳಿದರು.
“ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಸಂಗ್ರಹಿಸುತ್ತಿರುವ ಎಲ್ಲ ರೀತಿಯ ಶುಲ್ಕ ಹೆಚ್ಚಳವನ್ನು ಕೂಡಲೇ ಕೈ ಬಿಡಬೇಕು. ಹಾಗೂ ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ-ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
“ಹೊಸದಾಗಿ ಶುಲ್ಕ ವಿಧಿಸಿರುವುದನ್ನು ಹಾಗೂ ಶುಲ್ಕ ಹೆಚ್ಚಳ ಮಾಡಿರುವುದನ್ನು ಕೈಬಿಡಬೇಕು. ನೋಂದಣಿ ಹಾಗೂ ಬಿಲ್ ಕೌಂಟರ್‌ಗಳನ್ನು ಹೆಚ್ಚಿಸಬೇಕು. ಹೆಚ್ಚಿನ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಆಸ್ಪತ್ರೆ ಆವರಣದೊಳಗಡೆ ಸಮರ್ಪಕ ರಸ್ತೆ ನಿರ್ಮಿಸಬೇಕು. ರೋಗಿಗಳ ಸಂಖ್ಯೆಗನುಗುಣವಾಗಿ ಅವಶ್ಯಕ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಲ್ಯಾಬ್ ಟೆಕ್ನೀಶಿಯನ್‌ಗಳನ್ನು ನೇಮಕ ಮಾಡಬೇಕು. ಆಸ್ಪತ್ರೆಯ ಅವಶ್ಯಕತೆಗನುಗುಣವಾಗಿ ಬೆಡ್ ಸೌಲಭ್ಯ ಒದಗಿಸಬೇಕು. ರೋಗಿಗಳಿಗೆ ಅವಶ್ಯಕವಿರುವಷ್ಟು ಔಷದಿಗಳನ್ನು ಸಮರ್ಪಕವಾಗಿ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಜನರ ಪರದಾಟ; ಚಾಲಕ, ನಿರ್ವಾಹಕರ ನೋವೂ ಬಹಿರಂಗ
ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ ಮನವಿ ಸ್ವೀಕರಿಸಿ ಮಾತನಾಡಿ, “ಡಿಸೆಂಬರ್ 6 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ(ಡಿಎಚ್‌ಒ), ಜಿಲ್ಲಾ ಶಸ್ತ್ರಾ ಚಿಕಿತ್ಸಕರು(ಡಿಎಸ್) ಅವರೊಂದಿಗೆ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು” ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿ ಸದಸ್ಯರುಗಳಾದ ಭುವನಾ, ದೀಪಾ ಧಾರವಾಡ, ಶರಣು ಗೋನವಾರ, ಮಧುಲತಾ ಗೌಡರ್, ಭವಾನಿಶಂಕರ್ ಗೌಡ ಸೇರಿದಂತೆ ಪಕ್ಷದ ಸದಸ್ಯರು, ಹಲವು ಬಡಾವಣೆಗಳ ನಾಗರಿಕರು ಇದ್ದರು.