ಧಾರವಾಡ ಜಿಲ್ಲಾ ಆಸ್ಪತ್ರೆ ಮತ್ತು ಹುಬ್ಬಳ್ಳಿ ಕಿಮ್ಸ್ ಸೇರಿದಂತೆ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸಲು ಹಾಗೂ ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರು ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲೆಯ ವಿವಿಧ ತಾಲೂಕು, ಬಡಾವಣೆ, ಹಳ್ಳಿಗಳಿಂದ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, “ರಾಜ್ಯದ ಸರ್ಕಾರಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಔಷಧಿಗಳು ಹಾಗೂ ವೈದ್ಯಕೀಯ ನಿರ್ಲಕ್ಷದಿಂದಾಗಿ ಬೆಳಗಾವಿ, ಬಳ್ಳಾರಿ, ಚಿಗಟೇರಿ, ಸಿದ್ದಾಪುರ ಸೇರಿ ಹಲವು ಕಡೆ ಬಾಣಂತಿಯರು ಮತ್ತು ನೂರಾರು ಹಸುಗೂಸುಗಳು ಸಾವನ್ನಪ್ಪಿವೆ. ರಾಜ್ಯ ಸರ್ಕಾರ ಹಾಲು, ವಿದ್ಯುತ್, ಸಾರಿಗೆ ದರಗಳನ್ನು ಏರಿಸಿ ಜನರಿಗೆ ಬರೆ ಎಳೆದಿದೆ. ಬಿಜೆಪಿ ಸರ್ಕಾರದ ಜನ ವಿರೋಧಿ ಅಲೆಯ ಲಾಭ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಅದೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಸಂದರ್ಭದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ನಿರಂತರವಾಗಿ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದೆ. ಬಲಿಷ್ಠ ಜನಾಂದೋಲನ ನಡೆಸಲು ಪಕ್ಷದ ಜತೆ ಜನರು ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯೆ ಮಧುಲತಾ ಗೌಡರ್ ಮಾತನಾಡಿ, “ಧಾರವಾಡ ಜಿಲ್ಲೆಯಾದ್ಯಂತ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಕಿಮ್ಸ್‌ನಂತಹ ದೊಡ್ಡ ಆಸ್ಪತ್ರೆಗಳವರೆಗೂ ಸಾಕಷ್ಟು ಸಮಸ್ಯೆಗಳಿವೆ. ಅವಶ್ಯಕತೆ ಇರುವಷ್ಟು ನುರಿತ ವೈದ್ಯರ, ದಾದಿಯರ, ಮತ್ತಿತರ ವೈದ್ಯಕೀಯ ಸಿಬ್ಬಂದಿಗಳ ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಯಿದೆ. ಚೀಟಿ, ಔಷಧಿ ಮತ್ತು ಹಣ ಪಾವತಿ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ನೂರಾರು ರೋಗಿಗಳು ದಿನವಿಡೀ ನಿಲ್ಲುವ ಪರಿಸ್ಥಿತಿಯಿದೆ. ಬಡರೋಗಿಗಳು ತಮ್ಮ ದಿನಗೂಲಿ ಬಿಟ್ಟು ಸಣ್ಣಪುಟ್ಟ ರೋಗಗಳಿಗೂ ವಾರಗಟ್ಟಲೆ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಆಗ್ರಹಿಸಿದರು.
ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ ಮಾತನಾಡಿ, ʼನಮ್ಮ ಪಕ್ಷವು ರಾಜ್ಯಾದ್ಯಂತ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸುಧಾರಣೆಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಆಗ್ರಹಿಸಿ, ಆರೋಗ್ಯ ಕ್ಷೇತ್ರದ ಖಾಸಗೀಕರಣ ಖಂಡಿಸಿ ಹೋರಾಟಗಳನ್ನು ಕೈಗೊಂಡಿದ್ದು ಅದರ ಭಾಗವಾಗಿ ಧಾರವಾಡ ಜಿಲ್ಲೆಯಲ್ಲಿ ಹೋರಾಟವನ್ನು ಕೈಗೆತ್ತಿಕೊಂಡಿದೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಸಮಸ್ಯೆಗಳನ್ನು ಆದ್ಯತೆಯೊಂದಿಗೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಭೆ ಕರೆಸುವುದಾಗಿ ತಿಳಿಸಿದ್ದಾರೆʼ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಗಂಗಾಧರ ಬಡಿಗೇರ, ಭುವನ ಬಳ್ಳಾರಿ, ದೀಪಾ ಧಾರವಾಡ, ಶರಣುಬಸವ ಗೋನವಾರ, ಭವಾನಿ ಶಂಕರ ಗೌಡ, ಗಂಗೂಬಾಯಿ ಕೊಕರೆ, ಹನುಮೇಶ ಹುಡೇದ್, ರಣಜಿತ್ ದೂಪದ್, ಶಶಿಕಲಾ ಮೇಟಿ, ಪ್ರೀತಿ ಸಿಂಗಾಡಿ ಸೇರಿದಂತೆ ಪಕ್ಷದ ಸದಸ್ಯರು, ಕಾರ್ಯಕರ್ತರು, ನಾಗರಿಕರು ಭಾಗವಹಿಸಿದ್ದರು.