“ಕಲಿತವರ ಕಾಮಧೇನು ಕಲಿಯದವರ ಕಲ್ಪವೃಕ್ಷವಾಗಿರುವ ಹಲವಾರು ತತ್ವಪದ ಮತ್ತು ಜನಪದಗಳು ದಿನನಿತ್ಯ ಕಾಯಕದಲ್ಲಿ ತೊಡಗಿರುವ ದುಡಿಮೆಗಾರರ ಕೊಡುಗೆ ಅಪಾರ” ಎಂದು ನೂಲ್ವಿಯ ತತ್ವಪದ ಹಾಡುಗಾರರಾದ ಮಂಜುನಾಥ ಬಸಪ್ಪ ರಾಟಿಮನಿ ಇವರು ಹೇಳಿದರು.
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುಡಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ, ಜಾನಪದ ಹಬ್ಬದ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾವು, ಬಂಡಿಗಾಲಿ, ರಾಶಿ, ತಳಿರು ತೋರಣಗಳಿಂದ ಶೃಂಗಾರಗೊಂಡ ಕಾಲೇಜಿನಲ್ಲಿ ಹಬ್ಬದ ವಾತಾವರಣವಿತ್ತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ದೇಶಿ ಉಡುಗೆಯಲ್ಲಿ ಕಂಗೊಳಿಸಿದರು. ಡೊಳ್ಳು, ಕುಂಭ, ಚಕ್ಕಡಿ, ಹೋರಿಗಳ ಮೂಲಕ ದ್ಯಾಮವ್ವನ ಗುಡಿಯಿಂದ ಕಾಲೇಜಿನವರೆಗೂ ಮುಖ್ಯ ಬೀದಿಯಲ್ಲಿ ಮೆರವಣಿಗೆ ಸಾಗಿತು.
ಜಾನಪದ ವಸ್ತುಗಳ ಪ್ರದರ್ಶನವನ್ನು ನಡೆಸಲಾಯಿತು. ಲಾವಣಿ ಹಾಡು, ಜನಪದ ನೃತ್ಯ ಮತ್ತು ಡೊಳ್ಳು ಕುಣಿತಗಳು ಎಲ್ಲರ ಮನಸೂರೆಗೊಂಡು ಸಹೃದಯದಲ್ಲಿ ಸಂಚಲನ ಸೃಷ್ಟಿಸಿದವು.
ಈ ಸುದ್ದಿ ಓದಿದ್ದೀರಾ? ಹಾವೇರಿ | ತಂದೆಯ ಸಾವಿನಲ್ಲೂ ಪರೀಕ್ಷೆ ಬರೆದ ಅಣ್ಣ-ತಂಗಿ
ಸಾಂಸ್ಕೃತಿಕ ಸಂಚಾಲಕರಾದ ಡಾ. ಭೀಮೇಶ ಯರಡೋಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯರು ಗಂಗಾಧರ ಗುಮ್ಮಗೋಳಮಠ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರು ಚೇತನ ಸಿ.ಎನ್, ಶ್ರೀಧರ ಮಾಯಣ್ಣವರ, ಡಾ. ಹನುಮಂತ ಕಲ್ಲೋಳಿಕರ, ವಾಯ್.ಎಚ್.ಬೀರಣ್ಣವರ, ಪಿ.ಜಿ. ಹರ್ಲಾಪುರ, ಡಾ. ನಾಗರಾಜ ದಳಪತಿ, ಅಪೂರ್ವ ಕೆ.ಎಚ್, ಶ್ರೀನಿವಾಸ್ ಎನ್ಕೆ, ದೇವರಾಜು, ಎಂ.ಎಂ.ಹೂಗಾರ, ಶೇಖ್ ಮೆಹಬೂಬ್, ತಹಶೀಲ್ದಾರ್, ಕೊಟ್ರೇಶ್ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಲತೇಶ ಪಾಟೀಲ ಮತ್ತು ಬಿ.ಸಿ ಅಮಾತಿಯವರು ನಡೆಸಿಕೊಟ್ಟರು. ವೀರೇಶ ಶಾಹಪುರಕರ ವಂದಿಸಿದರು.
