ಸಸ್ಯ ಮತ್ತು ಜೀವ ಸಂಕುಲದ ಪ್ರತೀಕವಾಗಿರುವ ಕಪ್ಪತಗುಡ್ಡ ರಕ್ಷಣೆಗೆ ನಿರಂತರ ಹೋರಾಟ ಮತ್ತು ಜಾಗೃತಿ ನಡೆಯುವುದು ಅನಿವಾರ್ಯವಾಗಿದ್ದು, ಮುಂದಿನ ದಿನಗಳಲ್ಲಿಯೂ ಅದನ್ನು ಸಂರಕ್ಷಿಸುವ ಹೊಣೆ ಯುವ ಪೀಳಿಗೆ ಮೇಲಿದೆ ಎಂದು ಕಪ್ಪತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಧಾರವಾಡ ನಗರದ ಕವಿವಿಯ ಸಿನೆಟ್ ಹಾಲ್‌ನಲ್ಲಿ ಗಾಂಧಿ ಅಧ್ಯಯನ ವಿಭಾಗ ಹಮ್ಮಿಕೊಂಡಿದ್ದ ಸಮಕಾಲೀನ ಪರಿಸರ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿ ಚಿಂತನೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಔಷಧಿ ಸಸ್ಯ ಸಂಕುಲ, ಉತ್ತಮ ಹವಾಗುಣ, ಶುದ್ಧ ಜಲಸಂಪತ್ತು ಇರುವ ಕಪ್ಪತಗುಡ್ಡದ ಮೇಲೆ ದುಷ್ಟ ಶಕ್ತಿಗಳು ಕಣ್ಣಿಟ್ಟಿವೆ. ಇದನ್ನು ಲೂಟಿ ಹೊಡೆಯಲು ಕಾಲ ಕಾಲಕ್ಕೆ ನಾನಾ ತಂತ್ರ ಮಾಡುತ್ತಿದ್ದಾರೆ. ಆದರೆ ಅದನ್ನು ಉಳಿಸಿಕೊಳ್ಳಲು ಮುಂದಿನ ಪೀಳಿಗೆ ಸಜ್ಜಾಗಬೇಕು. ಯುವಕರು ವರ್ಷಕ್ಕೆ ಒಂದು ಬಾರಿಯಾದರೂ ಕಪ್ಪತಗುಡ್ಡಕ್ಕೆ ಚಾರಣ ಹೋಗಿ, ಅದರ ರಕ್ಷಣೆಗೆ ಕಂಕಣ ಕಟ್ಟಬೇಕು ಎಂದರು.
ಇದನ್ನು ಓದಿದ್ದೀರಾ? ಗುಬ್ಬಿ | ಶಾಲೆ ಮುಂದೆ ಜಿಲೆಟಿನ್ ಕಡ್ಡಿ ಸ್ಫೋಟ: ವಿದ್ಯಾರ್ಥಿಯ ಕೈಗೆ ಗಂಭೀರ ಗಾಯ
ಚಿತ್ರನಟ ಸುರೇಶ ಹೆಬ್ಳಿಕರ್ ಮಾತನಾಡಿ, ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯಿಂದ ಪರಿಸರ ತೀವ್ರ ನಾಶವಾಗುತ್ತಿದೆ. ದೇಶಿ ಸಿದ್ದಾಂತಗಳ ಮೇಲೆ ಗಾಂಧಿಜಿ ತತ್ವಗಳ ಮೇಲೆ ಮತ್ತೆ ಪರಿಸರ ಸುಧಾರಿಸಲು ಅವಕಾಶವಿದ್ದು, ಯುವ ಪೀಳಿಗೆ ಸರಳ ಜೀವನ ರೂಢಿಸಿಕೊಳ್ಳಬೇಕು. ಆರ್ಥಿಕ ಪ್ರಗತಿ ಪರಿಸರ ನಾಶಕ್ಕೆ ಕಾರಣವಾಗದಂತಹ ದಾರಿ ಹುಡುಕಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಭಾರ ಕುಲಪತಿ ಡಾ.ಬಿ.ಎಂ.ಪಾಟೀಲ್ ಮಾತನಾಡಿ, ಜಗತ್ತು ಎಲ್ಲರ ಆಸೆಗಳನ್ನು ಪೂರೈಸಬಲ್ಲದು. ಪರಿಸರ ಜಾಗೃತಿ ಯುವ ಪೀಳಿಗೆಯಲ್ಲಿ ಹೆಚ್ಚಬೇಕಿದೆ ಎಂದರು.
ಅರ್ಥಶಾಸ್ತ್ರಜ್ಞ ಡಾ.ಗೋಪಾಲ ಕಡಿಕೋಡಿ, ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಶೆಟ್ಟರ, ಪಕ್ಷಿ ತಜ್ಞ ಆರ್.ಜಿ.ತಿಮ್ಮಾಪೂರ, ಹರ್ಷವರ್ಧನ ಶೀಲವಂತ, ಬಾಲಚಂದ್ರ ಜಾಬಶೆಟ್ಟಿ ಅವರುಗಳು ಪರಿಸರ ಮತ್ತು ಗಾಂಧಿ ಚಿಂತನೆ ಕುರಿತು ವಿಷಯ ಮಂಡಿಸಿದರು. ಕವಿವಿ ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥ ಡಾ.ಮಹಾದೇವ ದಳಪತಿ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್.ಬಿ.ಬಸೆಟ್ಟಿ ಸ್ವಾಗತಿಸಿ, ವಂದಿಸಿದರು.