ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಇತ್ತೀಚಿಗೆ ಮೂರು ವರ್ಷದ ಮಗು ಸಾವನ್ನಪ್ಪಿರುವ ಹಿನ್ನೆಲೆ, ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಾಯಿ ತನಿಖೆ ನಡೆಸಲು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ನವೆಂಬರ್ 8ಕ್ಕೆ ಬಾಲಕ ಯಲ್ಲಪ್ಪ ಮೃತಪಟ್ಟಿದ್ದ. ತದನಂತರ ಪಕ್ಕದ ಮನೆಯ ನಿವಾಸಿ, ಈ ಹಿಂದೆ ತನ್ನ ಪತಿ ವೆಂಕಪ್ಪ ಮರಿಸಿದ್ದಣ್ಣವರ ಮೇಲೆ ಟ್ರ್ಯಾಕ್ಟರ್ ಹರಿಸಲು ಮುಂದಾಗಿದ್ದ ವ್ಯಕ್ತಿ ನಾಗಲಿಂಗ ಜೋಗಿನ್ ಎಂಬುವವರು ನಾಪತ್ತೆ ಆಗಿದ್ದ. ಇದರಿಂದಾಗಿ ಬಾಲಕನ ತಾಯಿ ಶಾಂತಾ ಈ ಬಗ್ಗೆ ಸಂಶಯ ವ್ಯಕ್ತಪಡಿಸಲು ಕಾರಣವಾಗಿದೆ.
ಎರಡೂ ಕುಟುಂಬಗಳು ಕುರುಬ ಸಮುದಾಯಕ್ಕೆ ಸೇರಿದ್ದು, ದೂರದ ಸಂಬಂಧಿಗಳೆಂದು ಹೇಳಲಾಗಿದೆ. ಈ ಬಗ್ಗೆ ಸಂಶಯಪಟ್ಟ ತಾಯಿ, ತನ್ನ ಮಗನ ಸಾವು ಆಕಸ್ಮಿಕವಲ್ಲ, ಕೊಲೆ ನಡೆಸಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ ಬಾಲಕನ ಅಂತ್ಯ ಸಂಸ್ಕಾರವಾದ ನಂತರ ಶಾಂತಾ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಅದರಂತೆ ನವೆಂಬರ್ 14ಕ್ಕೆ ಪೊಲೀಸರು ಯಮನೂರು ಸ್ಮಶಾನ ಭೂಮಿಗೆ ಬೇಟ್ಟಿ ಕೊಟ್ಟು ಹೂತಿದ್ದ ಶವವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮುಂದಿನ ಪ್ರಕ್ರಿಯೆ ನಡೆಸಿದ್ದಾರೆ. ನವಲಗುಂದ ತಹಶೀಲ್ದಾರ್ ಸುಧೀರ್ ಸಾಹುಕಾರ್, ಪಿಎಸ್‌ಐ ಜನಾರ್ದನ ಭಟ್ರಳ್ಳಿ ನೇತೃತ್ವದಲ್ಲಿ ಶವ ಹೊರತೆಗೆಯುವ ಪ್ರಕ್ರಿಯೆಯನ್ನು ನಡೆಸಲಾಗಿದೆ.
ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮೃತ ಬಾಲಕ ಯಲ್ಲಪ್ಪನ ತಾಯಿ ಶಾಂತಾ ನ್ಯಾಯಕ್ಕಾಗಿ ಕಾಯುತ್ತಿದ್ದು, ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
ಈ ಕುರಿತು ಮೃತ ಬಾಲಕನ ತಾಯಿ ಶಾಂತಾ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಈ ಘಟನೆ ನಡೆದ ದಿವಸ ಮನೆಯಲ್ಲಿ ಯಾರೂ ಇರಲಿಲ್ಲ. ಅವತ್ತು ನನ್ನ ಮಗನನ್ನು ಅಂಗನವಾಡಿಯಿಂದ ಕರೆದುಕೊಂಡು ಬಂದ ನಂತರ ಈ ಘಟನೆ ಸಂಭವಿಸಿದೆ. ಪಕ್ಕದ ಮನೆಯವರಿಗೂ ನಮಗೂ ಸುಮಾರು ವರ್ಷದಿಂದ ಜಗಳವಿದೆ. ಕಬ್ಬಿಣದ ಬಾಂಡ್ ಫಾರ್ಮ್ ನನ್ನ ಮಗನ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪಕ್ಕದ ಮನೆಯ ನಾಗಲಿಂಗ ಎಂಬುವವರು ನನ್ನ ಮಗನನ್ನು ಎತ್ತಿಕೊಂಡು ಬಂದು ಹೇಳಿದರು. ನಂತರ ಅವರು ಯಾರಿಗೂ ಕಾಣದೆ ನಾಲ್ಕೈದು ದಿನ ನಾಪತ್ತೆ ಆಗಿದ್ದರಿಂದ ನನಗೆ ಸಂಶಯ ಬಂದು, ತನಿಖೆಗೆ ಒತ್ತಾಯಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಮುಂದುವರಿದು, “ಅವರೇ ಕೊಲೆ ಮಾಡಿದ್ದಾರೆ ಎಂದೂ ನಾನು ಹೇಳುವುದಿಲ್ಲ. ಏಕೆಂದರೆ ನಾನಂತೂ ಈ ಘಟನೆಯನ್ನು ಕಣ್ಣಾರೆ ಕಂಡಿಲ್ಲ. ಅವರಿಗೂ ನಮಗೂ ಮೊದಲೇ ವೈಷಮ್ಯವಿದ್ದ ಕಾರಣ ಪಕ್ಕದ ಮನೆಯವರ ಮೇಲೆ ಸಂಶಯ ಮೂಡಲು ಕಾರಣವಾಯಿತು. ಇನ್ನು ನೆರೆ ರಾಜ್ಯಕ್ಕೆ ದುಡಿಯಲು ಹೋಗಿರುವ ನನ್ನ ಪತಿಯೂ ಆ ಸಮಯದಲ್ಲಿ ಲ ಇರಲಿಲ್ಲ ಮತ್ತು ಈಗಲೂ ಬಂದಿಲ್ಲ. ಈ ಸಮಯ ನೋಡಿಕೊಂಡು ಈ ರೀತಿಯ ಕೃತ್ಯಕ್ಕೆ ಇಳಿದಿರಬಹುದು ಎಂಬ ಸಂಶಯವಿದೆ. ನಾನು ದೂರು ನೀಡಿದ ನಂತರ ಪೊಲೀಸರು ನಾಗಲಿಂಗ ಎಂಬಾತನನ್ನು ಬಂಧಿಸಿದ್ದಾರೆ. ನಾನು ಏನೂ ತಪ್ಪು ಮಾಡಿಲ್ಲವೆಂದು ಪೊಲೀಸರ ಮುಂದೆಯೂ ಅವರು ಹೇಳಿಕೊಂಡಿದ್ದಾರೆ. ತನಿಖೆ ಆಗಲಿ” ಎಂದು ತಿಳಿಸಿದ್ದಾರೆ.
ಮನೆಯ ಅಂಗಳದಿಂದ ಸ್ವಲ್ಪ ದೂರದಲ್ಲಿ ಆಟವಾಡಲು ಹೋದ ನನ್ನ ಮಗ ವಾಪಸ್ಸು ಮನೆಗೆ ಬಂದಿದ್ದು ಶವವಾಗಿ. ಇದ್ದ ಒಬ್ಬ ಮಗನು ಹೀಗಾದರೆ ಏನು ಮಾಡುವುದು? ಯಾವುದಕ್ಕೂ ತನಿಖೆ ನಡೆಯಲಿ, ವೈದ್ಯಕೀಯ ವರದಿ ಬಂದ ಮೇಲೆ ಸತ್ಯ ತಿಳಿಯುತ್ತದೆ. ಒಂದು ವೇಳೆ ಸಾವು ಆಕಸ್ಮಿಕವಲ್ಲ ಎಂದು ಸಾಬೀತಾದರೆ ಕಾನೂನಾತ್ಮಕವಾಗಿ ಹೋರಾಡುತ್ತೇವೆ ಎಂದು ಮಗನನ್ನು ಕಳೆದುಕೊಂಡ ತಾಯಿ ಶಾಂತಾ ತಮ್ಮ ನೋವು ತೋಡಿಕೊಂಡಿದ್ದಾರೆ.
ವೈದ್ಯಕೀಯ ವರದಿ ಬಂದನಂತರ ಕೊಲೆ ಎಂದು ಸಾಬೀತಾದರೆ ನ್ಯಾಯಕ್ಕಾಗಿ ಊರ ಹೆದ್ದಾರಿಯಲ್ಲಿ ಬೃಹತ್ ಧರಣಿ ಕುಳಿತುಕೊಳ್ಳುತ್ತೇವೆ. ಸದ್ಯ ತನಿಖೆ ನಡೆಯುತ್ತಿದೆ. ವರದಿಯ ನಂತರ ಸತ್ಯಾಸತ್ಯತೆ ತಿಳಿಯುತ್ತದೆ. ಈಗಲೇ ಯಾರ ಮೇಲೂ ನೇರ ಆರೋಪವನ್ನೂ ಮಾಡುವುದಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ನಾವ್ಯಾರೂ ಇರದಿದ್ದ ಕಾರಣಕ್ಕೆ ಸಾವಿನ ಬಗ್ಗೆ ತಿಳಿದುಕೊಳ್ಳಲು ದೂರು ಸಲ್ಲಿಸಲಾಗಿದೆ ಎನ್ನುತ್ತಾರೆ ಮೃತ ಬಾಲಕನ ಕುಟುಂಬಸ್ಥರು. ಮತ್ತು ಈ ಮೊದಲು ಅನೇಕ ಬಾರಿ ನಮ್ಮ ಕುಟುಂಬದ ಮೇಲೆ ಆ ಕುಟುಂಬವು ಹಲ್ಲೆ ಇತ್ಯಾದಿ ಧ್ವೇಷ ಕಾರುತ್ತಲೇ ಬಂದಿದೆ. ಜಗಳ ಸರ್ವೆ ಸಾಮಾನ್ಯವೆಂದು ನಾವೂ ಸುಮ್ಮನೆ ಕುಳಿತಿದ್ದೆವು. ಆದರೆ ಇಂತಹ ದೊಡ್ಡ ಅನಾಹುತ ಮಾಡುತ್ತಾರೆ ಎಂದು ನಮಗೆ ಕನಸಿನಲ್ಲಿಯೂ ಅನಿಸಿರಲಿಲ್ಲ ಎಂದು ದುಃಖ ವ್ಯಕ್ತಪಡಿಸುತ್ತಾರೆ.
ಈ ವರದಿ ಓದಿದ್ದೀರಾ? ಉತ್ತರ ಕನ್ನಡ | ಅನಾಥ ರಕ್ಷಕರ ಮೇಲೆ ಹಲ್ಲೆ, ಕೊಲೆ ಯತ್ನ : ತನಿಖೆಗೆ ಆಗ್ರಹ
ಇನ್ನು ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಮಾತನಾಡಿ, ಈಗಾಗಲೇ ಬಾಲಕನ ಮೃತ ದೇಹವನ್ನು ಹೊರತೆಗೆದು ಪಂಚನಾಮೆ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ. ವರದಿ ಬರುವ ತನಕ ಕಾಯುತ್ತಿದ್ದೇವೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ವೈದ್ಯಕೀಯ ವರದಿಯ ನಂತರ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.
ಈಗ ಬಾಲಕನ ಕುಟುಂಬಸ್ಥರು ಹಾಗೂ ಪೊಲೀಸರು ವೈದ್ಯಕೀಯ ವರದಿಯನ್ನು ಕಾಯುತ್ತಿದ್ದಾರೆ. ವರದಿಯಲ್ಲಿ ಏನಿರಲಿದೆ ಎಂಬುದು ಸದ್ಯ ಗ್ರಾಮಸ್ಥರನ್ನೂ ಕೂಡ ಕಾಯುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.