ವಿಶ್ವ ಪರ್ಯಟನೆ ಮಾಡುವುದರಿಂದ ಜೀವನಾನುಭವ ಹೆಚ್ಚುತ್ತದೆ ಮತ್ತು ಪ್ರವಾಸೋಧ್ಯಮವು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಪ್ರೆಸ್ಟೀಜ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ನಿರ್ದೇಶಕ ರಾಘವೇಂದ್ರ ಆನೆಗುಂದಿ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಧಾರವಾಡ ಪ್ರೆಸ್ಟೀಜ್ ಇನ್ಸ್ಟೀಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ಸಹಯೋಗದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
ರಾಜ್ಯ ಮತ್ತು ದೇಶದಲ್ಲಿ ಸಾವಿರಾರು ಪ್ರವಾಸಿ ತಾಣಗಳು ಇವೆ ಮತ್ತು ಲಕ್ಷಾಂತರ ಪ್ರವಾಸಿಗರ ಸಂಚರಿಸುತ್ತಾರೆ, ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು ಇಂದು ಹಂಪಿ ಮತ್ತು ಇನ್ನಿತರ ಪ್ರವಾಸಿ ತಾಣಗಳ ಉಳಿವಿಗೆ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ಇಲಾಖೆ ಕಾರಣವಾಗಿದೆ. ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಒಂದು ಊರಿನಿಂದ ಇನ್ನೊಂದು ಊರಿಗೆ, ಜಿಲ್ಲೆ, ರಾಜ್ಯ, ದೇಶದಿಂದ ದೇಶಕ್ಕೆ ಪ್ರಯಾಣ ಮಾಡಬೇಕು. ನಮ್ಮ ಸುತ್ತ ಮುತ್ತಲಿನ ಪ್ರಕೃತಿ ನಮಗೆ ವಿವಿಧ ರೀತಿಯ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದರು.
ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡ ಕಡೆಯುವುದು, ಮಣ್ಣು ಕೊರೆಯುವ ಮೂಲಕ ಪ್ರಕೃತಿಗೆ ಹಾನಿ ಮಾಡುತ್ತಿದ್ದಾನೆ. ಹೆಚ್ಚು ಜನ ಸಂಖ್ಯೆಯಿಂದ ಭೂಮಿಯ ಮೇಲಿನ ಪ್ರಕೃತಿ ನಾಶವಾಗುತ್ತಿದೆ ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಎನ್ನುವುದು ಊಹೆ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಉಪನ್ಯಾಸಕ ವಸೀಮ್ ಫಾರೂಕಿ ಮಾತನಾಡಿ, ಪ್ರತಿಯೊಂದು ರಾಷ್ಟ್ರವು ತಮ್ಮದೇ ಆದ ಉಡುಗೆ ತೊಡುಗೆ, ಆಚಾರ ವಿಚಾರ, ಆಡಳಿತ, ಉದ್ಯಮಗಳನ್ನು ಹೊಂದಿವೆ. ಪ್ರಪಂಚದಲ್ಲಿನ 195 ರಾಷ್ಟ್ರಗಳು ತಮ್ಮದೇ ಆದಂತಹ ಆಚರಣೆಗಳು, ಭಾಷೆ, ಸಂಸ್ಕೃತಿಯನ್ನು ಹೊಂದಿವೆ. ಈ ವೈವಿಧ್ಯಮಯ ಬದುಕನ್ನು ಅವಕಾಶ ಸಿಕ್ಕರೆ ಎಲ್ಲರೂ ನೋಡಬೇಕೆಂದು ಹೇಳಿದರು.
ಪ್ರವಾಸೋದ್ಯಮ ಮತ್ತು ಶಾಂತಿ ಈ ವಿಷಯದ ಕುರಿತು ಹಿಂದುಸ್ಥಾನ ಯಾತ್ರಾ ಸಂಸ್ಥೆಯ ವಿಲಾಸಕುಮಾರ ದೇಸಾಯಿ ವಿಶೇಷ ಉಪನ್ಯಾಸ ನೀಡಿದರು. ನ್ಯಾಯವಾದಿ ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ ದೇಸಳ್ಳಿ, ಸಮಾಲೋಚಕ ಚೇತನ್ ಕ್ಯಾಸನೂರ, ವಿಭಾಗದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.