ಪ್ರಾದೇಶಿಕ ಅಸಮತೋಲನ ಹಿನ್ನೆಲೆಯಲ್ಲಿ ನೀಡಲಾಗಿದ್ದ ನಂಜುಂಡಪ್ಪ ವರದಿಯು ಎಷ್ಟರ ಮಟ್ಟಿಗೆ ರಾಜ್ಯದಲ್ಲಿ ಅನುಷ್ಠಾನವಾಗಿದೆ ಎಂಬುದರ ಕುರಿತು ರಾಜ್ಯದ 26 ಜಿಲ್ಲೆಗಳಿಗೆ ಪ್ರವಾಸ ಮಾಡಿ ಅಧ್ಯಯನ ಮಾಡಿದ್ದು, ಬರುವ ಅಕ್ಟೋಬರ್‌ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಗೋವಿಂದರಾವ್ ಹೇಳಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶಾಸಕರ, ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಡಾ.ಡಿ.ಎಂ.ನಂಜುಂಡಪ್ಪ ವರದಿಯಾಗಿರುವ ಅಭಿವೃದ್ಧಿ, ಬದಲಾವಣೆ ಹಿನ್ನಲೆಯಲ್ಲಿ ಅಧ್ಯಯನ ಮಾಡಿ, ಅದಕ್ಕೆ ಪೂರಕವಾಗಿ ಅಸಮತೋಲನ, ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಅಗತ್ಯವಿರುವ ಅಂಶಗಳನ್ನು ಶಿಫಾರಸ್ಸು ಮಾಡುವ ಹಿನ್ನಲೆಯಲ್ಲಿ ಸಮಿತಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಧ್ಯಯನ ಪ್ರವಾಸ ಮಾಡುತ್ತಿದೆ ಎಂದರು.
ಪ್ರಾದೇಶಿಕ ಅಸಮತೋಲನ ಹಿನ್ನೆಲೆಯಲ್ಲಿ ನಂಜುಂಡಪ್ಪ ವರದಿ ಅನ್ವಯ ರಾಜ್ಯದ 114 ತಾಲೂಕುಗಳಲ್ಲಿ 22 ವರ್ಷಗಳಲ್ಲಿ ರಾಜ್ಯ ಸರ್ಕಾರ ರೂ. 31 ಸಾವಿರ ಕೋಟಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ಯಾವ ತಾಲೂಕು ಅಭಿವೃದ್ಧಿಗೊಂಡಿದೆ, ಯಾವ ತಾಲೂಕು ಇನ್ನೂ ಹಿಂದುಳಿದಿದೆ ಎಂಬುದನ್ನು ಅರಿಯಲು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದೆ ಎಂದರು.
ಕಳೆದ ಏಳು ತಿಂಗಳಿಂದ ಸಮಿತಿಯು ರಾಜ್ಯದಲ್ಲಿ ಸಂಚರಿಸಿ ಅಧ್ಯಯನ ಮಾಡುವುದರ ಜೊತೆಗೆ ಹಿಂದುಳಿದ ತಾಲೂಕುಗಳಲ್ಲಿ ಇನ್ನೂ ಏನೇನು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕು, ಕೊರತೆಗಳೇನಿವೆ ಎಂಬುದನ್ನು ಹಲವು ಸೂಚ್ಯಂಕಗಳ ಮೂಲಕ ಅರಿಯುತ್ತಿದ್ದೇವೆ. ಜೊತೆಗೆ ಸಂಘ-ಸಂಸ್ಥೆಗಳ, ಅಧಿಕಾರಿಗಳಿಂದ ಸಂವಾದ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ.
ರಾಜ್ಯದಲ್ಲಿ ನಡೆಸಿದ ಪ್ರವಾಸದಲ್ಲಿ ನಾಲ್ಕು ವಿಭಾಗಗಳಲ್ಲಿ ಕಲ್ಯಾಣ ಕರ್ನಾಟಕ ಇನ್ನೂ ಹಿಂದುಳಿದ ಪ್ರದೇಶಗಳು ಹೆಚ್ಚಿದ್ದು, ಕಿತ್ತೂರು ಕರ್ನಾಟಕ ಅಂತ್ಯಂತ ಹಿಂದುಳಿದ ತಾಲೂಕುಗಳು ಇಲ್ಲದೇ ಇದ್ದರೂ ಹಿಂದುಳಿದ ಪ್ರದೇಶಗಳಿವೆ. ಹೀಗಾಗಿ ತಾಲೂಕು ಮಟ್ಟದಲ್ಲಿ ಹೋಗಿ, ಅಧ್ಯಯನ ಮಾಡಿ, ನಾವು ವರದಿ ಸಲ್ಲಿಸಲಿದ್ದೇವೆ. ನಂಜುಂಡಪ್ಪ ವರದಿ ಅನ್ವಯ ಪ್ರಾದೇಶಿಕ ಅಸಮತೋಲನಕ್ಕೆ ಬಿಡುಗಡೆಯಾದ ಹಣ ಸರಿಯಾಗಿ ಹಂಚಿಕೆ ಆಗದಿರುವುದು ಸೇರಿದಂತೆ ಹಲವು ಅಂಶಗಳ ಕುರಿತು ಅಧ್ಯಯನ ಮಾಡುತ್ತೇವೆ. ಮುಂದಿನ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಮಿತಿ ಕಾರ್ಯೋನ್ಮುಖವಾಗಿದೆ ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ಯುವಪೀಳಿಗೆ ಮೊಬೈಲ್ ಪ್ರಪಂಚದಲ್ಲಿ ಸಾಮಾಜಿಕ ಜವಾಬ್ದಾರಿ ಮರೆಯುತ್ತಿದೆ: ಶಿವಪ್ರಸಾದ್
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಅಭಿವೃದ್ಧಿಯಲ್ಲಿ ಭೌತಿಕ ಹಾಗೂ ಆಂತರಿಕ ಪ್ರಗತಿ ಮುಖ್ಯವಾಗಿದೆ. ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಆಗಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.