ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬಳಿಕ ಕಬ್ಬು ಬೆಳೆಗಾರರು ತಮ್ಮ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಭರವಸೆಗಳನ್ನು ಈಡೇರಿಸಲು ಸರ್ಕಾರಕ್ಕೆ ನ. 26ರವರೆಗೆ ಗಡುವು ನೀಡಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ನ.27ರಂದು ಮತ್ತೆ ಹುಬ್ಬಳ್ಳಿಗೆಯಲ್ಲಜ ಹೋರಾಟ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.
ಧಾರವಾಡದ ಪಟ್ಟಣದ ಯರಿಕೊಪ್ಪದಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ, “ಕೇಂದ್ರ ಸಚಿವರೊಂದಿಗೆ ರಾತ್ರಿ ಸುದೀರ್ಘ ಚರ್ಚೆ ನಡೆಸಲಾಗಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ದೊರೆತಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಸಮಿತಿ ರಚಿಸಿರುವುದರಿಂದ ಸರ್ಕಾರಕ್ಕೆ ಸಮಯ ನೀಡೋಣ. ಒಂದು ತಿಂಗಳ ಕಾಲಾವಕಾಶ ನೀಡಿ, ಸಕ್ಕರೆ ದಾಸ್ತಾನು ಮತ್ತು ಮಾರಾಟದ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ಗಮನಿಸೋಣ” ಎಂದರು.
“ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ನಿಗದಿಯಾಗುವವರೆಗೆ ಕಾರ್ಖಾನೆಗಳಿಂದ ಸಕ್ಕರೆ ಹೊರಹೋಗಬಾರದು ಎಂಬುದು ರೈತರ ಪ್ರಮುಖ ಆಗ್ರಹವಾಗಿದೆ. ಸರ್ಕಾರ ಭರವಸೆಯಂತೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ಆರಂಭಿಸಲಾಗುವುದು. ಕೇಂದ್ರ ಸಚಿವರು ಸಮಯ ಕೇಳಿರುವುದರಿಂದ ಅವರಿಗೆ ಗೌರವ ನೀಡಿ ಸದ್ಯಕ್ಕೆ ಪಾದಯಾತ್ರೆಯನ್ನು ಸ್ಥಗಿತಗೊಳಿಸುತ್ತೇವೆ. ಅಲ್ಲಿಯವರೆಗೆ ರೈತರು ಜಾಗೃತರಾಗಿರಬೇಕು” ಎಂದು ಕರೆ ನೀಡಿದರು.
“ಇದೇ ವೇಳೆ ರೈತ ಮುಖಂಡ ಶಶಿಕಾಂತ್ ಗುರುಜಿ ಮಾತನಾಡಿ, “ಡಿಸಿಎಂ ಅವರು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಕಬ್ಬಿನ ದರ ನಿಗದಿಪಡಿಸಬೇಕು. ಇಲ್ಲದಿದ್ದರೆ ಸಕ್ಕರೆ ಕಾರ್ಖಾನೆಗಳನ್ನು ಬಂದ್ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.





