ಹಸುವೊಂದು ಒಂದೇ ಬಾರಿಗೆ ಮೂರು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನವಲಗುಂದ ತಾಲ್ಲೂಕಿನ ಗುಡದಕೇರಿ ಓಣಿಯಲ್ಲಿ ನಡೆದಿದೆ.
ಹಸು ಮೂರು ಕರುಗಳಿಗೆ ಜನ್ಮ ನೀಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಅಕ್ಕ ಪಕ್ಕದ ಓಣಿ, ಊರಿನವರು ಬಂದು ಕರುಗಳನ್ನ ನೋಡಿ ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಹಸು ಒಂದೇ ಕರು ಹಾಕುವುದು. ಆದರೆ, ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಿದ ಉದಾಹರಣೆ ಇದೆ. ಆದರೆ ಮೂರು ಕರುಗಳಿಗೆ ಜನ್ಮ ನೀಡುವುದು ತುಂಬಾ ವಿರಳ.
ಮಿಶ್ರ ತಳಿಯ ಹಸು ಇದಾಗಿದ್ದು, ಮೂರು ಕರುಗಳೂ ಆರೋಗ್ಯವಾಗಿವೆ. ಹಸುವಿನ ಮೇಲೆ ಅಪಾರ ಪ್ರೀತಿ ಹೊಂದಿರುವ ಹಸುವಿನ ಮಾಲೀಕ ಅಬ್ದುಲ್ ರಜಾಕ್ ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ಜಾನುವಾರು ಮಾರುಕಟ್ಟೆಯಲ್ಲಿ 70,000 ರೂ.ಗೆ ಹಸುವನ್ನು ಖರೀದಿಸಿದ್ದರು.
“ಪಶುವೈದ್ಯ ವೈದ್ಯ ಎಚ್ ಪಿ ಸವಣೂರ್ ಕೃತಕ ಗರ್ಭಧಾರಣೆಯನ್ನು ಮಾಡಿದ್ದರು. ಇದೀಗ ಹಸು ಮೂರು ಕರುಗಳಿಗೆ ಜನ್ಮ ನೀರಿದೆ. ಮೂರು ಕರುಗಳಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣಾಗಿದೆ. ಹಸುವಿಗೆ ಐದು ವರ್ಷ ವಯಸ್ಸಾಗಿದೆ. ಹಸುವನ್ನು ಅದೃಷ್ಟ ತರುತ್ತದೆ ಎಂದೇ ನಾವು ನಂಬಿದ್ದೇವೆ. ಈಗ, 3 ಕರುಗಳ ಜನನದೊಂದಿಗೆ, ನಮ್ಮ ನಂಬಿಕೆ ಬಲಗೊಂಡಿದೆ” ಎಂದು ಹಸುವಿನ ಮಾಲೀಕ ಅಬ್ದುಲ್ ರಜಾಕ್ ಹೇಳಿದ್ದಾರೆ.
