ಮಹಿಳೆಯು ಭಾರತದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದಿದ್ದಾಳೆ. ಹೆಣ್ಣು ದೇವತೆ ಸಮಾನಳು. ಭಾರತದಲ್ಲಿ ಎಲ್ಲ ನದಿಗಳಿಗೆ ಮಹಿಳೆಯರ ಹೆಸರನ್ನು ನಮ್ಮ ಪೂರ್ವಜರು ಇಟ್ಟಿದ್ದಾರೆ. ನಮ್ಮ ಸಂಪ್ರದಾಯದಲ್ಲಿ ಪೂಜ್ಯತೆಗೆ ಮಹಿಳೆ ಒಳಗಾಗಿದ್ದಾಳೆ. ಆದರೆ, ಇಂದು ಮಹಿಳೆಯನ್ನು ಕಾಣುವ ರೀತಿ ಬದಲಾಗಿದೆ. ಅದು ತಪ್ಪು. ಭ್ರೂಣ ಹತ್ಯೆ ಮಹಾ ಪಾಪ ಎಂಬ ಅರಿವು ಎಲ್ಲರಲ್ಲಿಯೂ ಮೂಡಿಸುವ ಅಗತ್ಯತೆ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್ ದೊಡ್ಡಮನಿ ಹೇಳಿದ್ದಾರೆ.
ಧಾರವಾಡದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಲವು ಇಲಾಖೆಗಳ ಜಿಲ್ಲಾ ವಿಭಾಗಗಳು ಒಗ್ಗೂಡಿ ಆಯೋಜಿಸಿದ್ದ ‘ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ’ ಕುರಿತು ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿ ಪಾಟೀಲ, “ವೈದ್ಯರು, ಸಮಾಜ – ಇಬ್ಬರೂ ಕೈಜೋಡಿಸಿ ಹೆಣ್ಣನ್ನು ರಕ್ಷಿಸಬೇಕು. ಈಗಾಗಲೇ ಭಾರತದಲ್ಲಿ ಲಿಂಗಾನುಪಾತ ಬಹಳ ಕಡಿಮೆ ಇದೆ. ಇದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬ ಎಚ್ಚರಿಕೆಯ ಅರಿವು ನಮಗಿರಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶಿವಕುಮಾರ ಎಫ್ ಕುಂಬಾರ, “ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಕಾನೂನುಗಳು ಶಿಕ್ಷೆಯ ಪ್ರಮಾಣ, ಲಿಂಗ ಅಸಮಾನತೆಯ ಪರಿಣಾಮಗಳ ಕುರಿತು ತಿಳಿಸಿಕೊಟ್ಟರು. ಭ್ರೂಣಲಿಂಗ ಪತ್ತೆ ಒಂದು ಅಪರಾಧ” ಎಂದರು.
ಕಾರ್ಯಕ್ರಮದಲ್ಲಿ ಕಿಟಲ್ ವಿದ್ಯಾಲಯದ ಪ್ರಾಚಾರ್ಯ ಡಾ. ರೇಖಾ ಎಮ್. ಜೋಗುಳ, ಡಾ. ಸುರೇಶ ಬಿ. ನ್ಯಾಮತಿ, ಜಿಲ್ಲಾಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಚಿತ್ತರಗಿ, ತಾಲೂಕ ಆರೋಗ್ಯ ಅಧಿಕಾರಿ ಡಾ. ತನುಜಾ ಕೆ.ಎನ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ ಇದ್ದರು.
ಕುಮಾರಿ ಪೂಜಾ ಮಹಾವಿದ್ಯಾಲಯದ ಪ್ರಾರ್ಥಿಸಿದರು, ಡಾ. ಕವಿತಾ ಚಾಂದಗುಡೆ ವಂದಿಸಿದರು. ಡಾ. ವಿ.ಐ ಶೇಖ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿಗಳು, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಮ್.ಎನ್. ಅಗಡಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿರೇಖಾ ಬಾಡಗಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.