ದಿಗಂತ್ ಪ್ರಕರಣದಲ್ಲಿ ಫರಂಗಿಪೇಟೆ ಬಂದ್ ಮಾಡಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಬಿಜೆಪಿ ಶಾಸಕರುಗಳು, ಬಜರಂಗ ದಳದ ಮುಖಂಡರು, ಕುತ್ತಾರು ಕೊರಗಜ್ಜನ ಸನ್ನಿಧಾನದಲ್ಲಿ ಮುಸ್ಲಿಂ ವಿರೋಧಿ ಕೊಳಕು ಭಾಷಣ ಮಾಡಿದ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಪೊಲೀಸ್ ಇಲಾಖೆ ಮೌನ ವಹಿಸಿರುವುದನ್ನು ತಾವು ಸಮರ್ಥಿಸಿದ್ದೀರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಸಂಚಾಲಕ ಮುನೀರ್ ಕಾಟಿಪಳ್ಳ ಯು ಟಿ ಖಾದರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಯು ಟಿ ಖಾದರ್ ಅವರೆ, “ಪ್ರಾಣಿ(ನಾಯಿ) ಕಚ್ಚಿದರೆ ನಾವು ವಾಪಾಸ್ ಕಚ್ಚಲು ಆಗುವುದಿಲ್ಲ” ಒಪ್ಪುತ್ತೇವೆ. ಸಿಕ್ಕಸಿಕ್ಕವರನ್ನು ಕಚ್ಚುವ, ಅಟ್ಟಿಸಿಕೊಂಡು ಹೋಗುವ ಪ್ರಾಣಿಗಳನ್ನು ಅದರ ಪಾಡಿಗೆ ಬಿಡಲು ಆಗುವುದಿಲ್ಲ. ಕಚ್ಚುವ ಚಾಳಿ ಹೊಂದಿರುವ ಪ್ರಾಣಿಗಳನ್ನು ಕೂಡಿಹಾಕಬೇಕು, ಪಳಗಿಸಬೇಕು, ಬುದ್ದಿ ಕಲಿಸಬೇಕು. ಸರಿ ದಾರಿಗೆ ಬರಲಿಲ್ಲ ಅಂದರೆ, ನಾಗರಿಕ ಸಮಾಜದಿಂದ ಪ್ರತ್ಯೇಕಗೊಳಿಸಬೇಕು. ಇದು ವ್ಯವಸ್ಥೆ(ಸರ್ಕಾರ)ಯ ಜವಾಬ್ದಾರಿ. ಇಷ್ಟು ವಿಷಯ ಸಭಾಪತಿಗಳಾಗಿರುವ ತಮಗೆ ತಿಳಿದಿರುವುದಿಲ್ಲವೇ?” ಎಂದು ಕಿಡಿಕಾರಿದರು.
“ಸುಮೊಟೊ ಪ್ರಕರಣ ಹೂಡಿದರೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲವೆಂದು ನಿಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದೀರಿ(ಜನಪರ ಸಂಘಟನೆಗಳು ಹೆದ್ದಾರಿ ಸಮಸ್ಯೆಗಳು, ಪ್ಯಾಲೆಸ್ತೀನ್‌ನಲ್ಲಿ ಶಾಂತಿಗೆ ಆಗ್ರಹಿಸಿ ಶಾಂತಿಯುತ ಸಭೆ ನಡೆಸಿದಾಗ ಮಂಗಳೂರು ಪೊಲೀಸ್ ಕಮೀಷನರ್ ಸುಮೊಟೊ ಮೊಕದ್ದಮೆ ಹಾಕಿದ ಸಂದರ್ಭ ನೀವು ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡದ್ದನ್ನು ಈ ಸಂದರ್ಭ ನೆನಪಿಸಿಕೊಳ್ಳುವೆ). ಹಾಗೆಯೇ, ದ್ವೇಷ ಭಾಷಣಕಾರರ ವಿರುದ್ಧ ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ಇದರಿಂದ ಮತ್ತಷ್ಟು ವಿಭಜನೆಯಾಗುತ್ತದೆ. ಕೋಮುವಾದಿಗಳನ್ನು ತೆಗಳುವುದು ಜಾತ್ಯತೀತತೆ( ಕೋಮುವಾದದ ವಿರುದ್ಧ ಧ್ವನಿ ಎತ್ತುವುದು) ಅಲ್ಲ, ಪರಸ್ಪರ ಜೋಡಿಸುವುದು ಜಾತ್ಯತೀತತೆಯೆಂದು ಹೇಳುವ ಮೂಲಕ ಕೋಮುವಾದ/ಕೋಮುವಾದಿಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿರುವ ಜಾತ್ಯತೀತಯ ಚಳವಳಿಗಳು, ಜನಪರ ಸಂಘಟನೆಗಳನ್ನು ನಕಾರಾತ್ಮಕವಾಗಿ ಬಿಂಬಿಸಿದ್ದೀರಿ. ಕೋಮುವಾದಿ ಕೃತ್ಯಗಳು, ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಸಂದರ್ಭ ಮೌನವಾಗಿರಿರೆಂದು ಎಚ್ಚರಿಕೆ ನೀಡಿದ್ದೀರಿ(ಬಹುಷ ಉತ್ತರ ಪ್ರದೇಶದ ಮಾದರಿ) ಇದು ಆಘಾತಕಾರಿ. ದ್ವೇಷ ಭಾಷಣಗಳ ವಿರುದ್ದ ಕಾನೂನು ಕ್ರಮವೂ ಇಲ್ಲ, ನಾಗರಿಕರಿಗೆ ಪ್ರತಿಭಟಿಸುವ ಅವಕಾಶವೂ ಇಲ್ಲ. ಎಲ್ಲವೂ ಏಕಮುಖ, ಕೋಮು ಸಂಘಟನೆಗಳಿಗೆ ಇದು ಪೂರ್ಣ ಸ್ವಾತಂತ್ರ್ಯವಲ್ಲದೆ ಮತ್ತೇನಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಾನೂನು ಕ್ರಮಗಳನ್ನು ಕೈಗೊಂಡರೆ ನ್ಯಾಯಾಲಯದಲ್ಲಿ ಅದಕ್ಕೆ ಬೆಂಬಲ ಸಿಗುವುದಿಲ್ಲ(ದ್ವೇಷ ಭಾಷಣಗಳ ವಿರುದ್ಧ ಸುಪ್ರೀಂ ಕೋರ್ಟ್ ಆದೇಶ ನೀವು ಮರೆತಿದ್ದೀರಿ) ಅದಕ್ಕಾಗಿ ಮೊಕದ್ದಮೆ ಹೂಡಿಲ್ಲವೆಂದು ಹೇಳುವ ನೀವು, ಕೋಮುವಾದದ ರಾಜಕಾರಣಕ್ಕೆ ಪರ್ಯಾಯವಾದ ಕಾರ್ಯಕ್ರಮಗಳನ್ನಾದರೂ ಹಮ್ಮಿಕೊಂಡು ಕೋಮುವಾದಿ ಶಕ್ತಿಗಳಿಗೆ ಜಾತ್ಯತೀತ ಮುಖಾಮುಖಿಗೆ ಮುಂದಾಗುವುದಿಲ್ಲ ಯಾಕೆ? ಮೌನವೇ ಕೋಮುವಾದದ ರಾಜಕಾರಣಕ್ಕೆ ಸಶಕ್ತ ಪರ್ಯಾಯವೆಂದು ನೀವು ಭಾವಿಸುತ್ತೀರಾ? ಹಾಗಾದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 13 ಅಸೆಂಬ್ಲಿ ಕ್ಷೇತ್ರದಲ್ಲಿ 11 ಕ್ಷೇತ್ರಗಳನ್ನು ಕೋಮುವಾದಿ ಶಕ್ತಿಗಳು ಗೆಲುವು ಸಾಧಿಸಲು ಸಾಧ್ಯವಾದದ್ದು ಹೇಗೆ? ಉಡುಪಿ ಜಿಲ್ಲೆಯ ಐದರಲ್ಲಿ ಐದು ಕ್ಷೇತ್ರಗಳಲ್ಲೂ ಕೋಮು ಕ್ತಿಗಳು ದಿಗ್ವಿಜಯ ಸಾಧಿಸಿದರಲ್ಲಾ, ಅಲ್ಲಿ ಕೋಮುವಾದದ ಎದುರಾಗಿ ಮೌನ ಅಲ್ಲದೆ ಇನ್ನೇನಿತ್ತು. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸತತ ಹತ್ತು ಚುನಾವಣೆಗಳನ್ನು ಬಿಜೆಪಿ ಗೆಲುವು ಸಾಧಿಸಿದ್ದು ಹೇಗೆ? ಕೋಮುವಾದದ ಎದುರಾಗಿ ಧ್ವನಿ ಎತ್ತಿದ ಕಾರಣಕ್ಕೆ ಅಂತ ಹೇಳುತ್ತೀರಾ, ಇದೆಲ್ಲಾ ನಿಮಗೆ ಅರ್ಥವಾಗದ ಸಂಗತಿಯೆಂದು ನಾವಂತೂ ಭಾವಿಸುವುದಿಲ್ಲ” ಎಂದರು.
“ಪ್ರತಿ ದಿನ ದ್ವೇಷ ಭಾಷಣ, ಮುಸ್ಲಿಂ, ಕ್ರೈಸ್ತ ವಿರೋಧಿ ಮಾತುಗಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯ ʼಬಲಿಷ್ಟʼ ಶಾಸಕರುಗಳ ಮಾತು ಬಿಡಿ. ಬಾಡಿಗೆ ಭಾಷಣಕಾರ, ಸುಳ್ಳಿಗೆ ವಿಖ್ಯಾತವೆಂದು ಜನ ಕೇವಲವಾಗಿ ಕಾಣುವ ಸೂಲಿಬೆಲೆಯಂಥವರು ನಿಮ್ಮದೇ ಕ್ಷೇತ್ರ ವ್ಯಾಪ್ತಿಯಲ್ಲಿರುವ, ಕೊರಗಜ್ಜನಂತಹ ತುಳುನಾಡಿನ ಸಾಂಸ್ಕೃತಿಕ ನಾಯಕ, ಆರಾಧ್ಯ ದೈವದ ಸನ್ನಿಧಿಯಲ್ಲಿ ನಿಂತು ಜನಾಂಗ ದ್ವೇಷದ ಭಾಷಣವನ್ನು ಪುಂಖಾನು ಪುಂಖವಾಗಿ ಮಾಡಿ, ಅದನ್ನು ಬಹಿರಂಗವಾಗಿ ಸಮರ್ಥಿಸುತ್ತ ಅಡ್ಡಾಡುತ್ತಿದ್ದರೂ ನಿಮ್ಮ ಪೊಲೀಸರು ಏನೂ ಮಾಡುವುದಿಲ್ಲ, ಬದಲಿಗೆ ಆತ ಹೋದಲ್ಲಿ, ಬಂದಲ್ಲಿ ಪೊಲೀಸ್ ರಕ್ಷಣೆ ಕೊಡುತ್ತಾರೆಂದರೆ ಏನರ್ಥ? ನಿಮ್ಮ ಸೂಚನೆ ಇದೆಯೆಂದೇ ತಾನೆ, ರಾಜ್ಯ ಸರ್ಕಾರ ಕರಾವಳಿಯನ್ನು ಪೂರ್ತಿಯಾಗಿ ಸಂಘಪರಿವಾರಕ್ಕೆ ಬಿಟ್ಟುಕೊಟ್ಟಿದೆ ಎಂದು ತಾನೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ ಜಿಲ್ಲೆಗೆ ಎರಡು ʼಅಕ್ಕ ಕೆಫೆʼ ಮಂಜೂರು
“ಪ್ರಿಯ ಯು ಟಿ ಖಾದರ್ ಅವರೆ, ಈಗಲಾದರು ಎಚ್ಚೆತ್ತುಕೊಳ್ಳಿ. ನಮಗೆ ನಿಮ್ಮ ಮೇಲೆ ವ್ಯಕ್ತಿಗತವೊ, ರಾಜಕೀಯವಾದದ್ದೋ ಅಸಹನೆ ಇಲ್ಲ. ಕೋಮುವಾದಿಗಳನ್ನು ಹಿಮ್ಮೆಟ್ಟಿಸಬೇಕೆಂಬ ಸದುದ್ಧೇಶದಿಂದ ಕಳೆದ ಚುನಾವಣೆಗಳಲ್ಲಿ ನಾವೆಲ್ಲ ನಿಮ್ಮ ಜತೆಗೆ ನಿಂತೆವು. ಈಗ ನಮ್ಮ ನಿರೀಕ್ಷೆಗಳು ಹುಸಿಯಾಗುತ್ತಿರುವುದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದಂತೆಯೇ ಈಗಲೂ ಕೋಮುಶಕ್ತಿಗಳು ಬೀದಿಯಲ್ಲಿ ವಿಜೃಂಭಿಸುತ್ತಿರುವುದು ನಮ್ಮಂತವರನ್ನು ವಿಚಲಿತಗೊಳಿಸಿದೆ. ಭವಿಷ್ಯದ ದಿನಗಳ ಕುರಿತು ಭೀತಿ ಉಂಟಾಗಿದೆ. ಆ ಕುರಿತು ನಿಮ್ಮ ನಡವಳಿಕೆಯ ಕುರಿತು ನಮಗೆ ತಕರಾರು. ಈಗಾಲಾದರು ನೀವು ಎಚ್ಚೆತ್ತುಕೊಳ್ಳಿ, ಕೋಮು ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲಿ. ನಾವು ನಿಮ್ಮ ಜೊತೆಗಿರುತ್ತೇವೆ. ಹಾಗಲ್ಲದಿದ್ದರೆ, ನಮ್ಮ ಜವಾಬ್ದಾರಿ ಏನಿದೆಯೊ ಆ ದಿಕ್ಕಿನಲ್ಲಿ ಮುನ್ನಡೆಯುತ್ತೇವೆ. ಅದು ನಮ್ಮೆಲ್ಲರ ಮೇಲಿನ ಚಾರಿತ್ರಿಕ ಜವಾಬ್ದಾರಿ” ಎಂದು ಎಚ್ಚರಿಕೆ ನೀಡಿದರು.