ಇನ್ನು ಮುಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ಪೊಲೀಸ್ ಠಾಣೆಗಳು ಡಿಜಿಟಲೀಕರಣಗೊಳ್ಳಲಿದ್ದು, ನವೆಂಬರ್ ವೇಳೆಗೆ ಠಾಣೆಗಳಲ್ಲಿ ಎಫ್‌ಐಆರ್ ನೋಂದಣಿ, ತನಿಖೆ ಇತ್ಯಾದಿ ಡಿಜಿಟಲ್ ಆಗಲಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ, “ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿ ಇ-ಆಫೀಸ್-ಮಿಷನ್ ಮೋಡ್ ಪ್ರಾಜೆಕ್ಟ್ (ಎಂಎಂಪಿ) ಅನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗುವುದು. ನವೆಂಬರ್ ವೇಳೆಗೆ ಎಲ್ಲ ಪೊಲೀಸ್ ಠಾಣೆಗಳು ಡಿಜಿಟಲ್ ಆಗಲಿವೆ” ಎಂದು ಹೇಳಿದರು.
“ಡಿಜಿಟೈಸೇಶನ್ ಅನ್ನು ಆದಷ್ಟು ಬೇಗ ಜಾರಿಗೆ ತರಲಾಗುವುದು. ಮೊದಲ ಹಂತದಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭೌತಿಕ ದಾಖಲೆಗಳನ್ನು ತೆಗೆದು ಇ-ಕಚೇರಿಗೆ ಬದಲಾಯಿಸಲಾಗಿದೆ. ಸಂಚಾರ ನಿರ್ವಹಣೆ ಮತ್ತು ಅಪರಾಧ ಪತ್ತೆಗೆ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಈಗ ಆಡಳಿತಾತ್ಮಕ ಕೆಲಸದಲ್ಲಿ ತಂತ್ರಜ್ಞಾನವನ್ನು ತರುತ್ತಿದ್ದೇವೆ” ಎಂದಿದ್ದಾರೆ.
“ಇದು ಕೆಲಸ ಕಾರ್ಯಗಳನ್ನು ವೇಗಗೊಳಿಸುತ್ತದೆ. ಸಿಬ್ಬಂದಿ ದಕ್ಷತೆಯನ್ನು ಹೆಚ್ಚಿಸುತ್ತದೆ. ಜತೆಗೆ ಕಚೇರಿಯಲ್ಲಿನ ಅವ್ಯವಸ್ಥೆ ಕಡಿಮೆಯಾಗುತ್ತದೆ. ಈ ವ್ಯವಸ್ಥೆಯು ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದರ ಜತೆಗೆ ಪಾರದರ್ಶಕತೆಯನ್ನು ತರುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಳೆದ ವರ್ಷಕ್ಕಿಂತ ನಾಯಿ ಕಡಿತಗಳ ಸಂಖ್ಯೆ ಹೆಚ್ಚಳ
“ಡಿಸಿಪಿ ಮತ್ತು ಎಸಿಪಿಗಳ ಕಚೇರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು. ಕ್ರಮೇಣ ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗುವುದು. ಈಗಾಗಲೇ, ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಇದನ್ನು ಇತರ ವಿಭಾಗಗಳಿಗೂ ವಿಸ್ತರಿಸುತ್ತೇವೆ. ಒಂದು ತಿಂಗಳಲ್ಲಿ ಸಂಪೂರ್ಣವಾಗಿ ಕಾಗದರಹಿತವಾಗಲು ಕಾರ್ಯ ನಿರ್ವಹಿಸುತ್ತೇವೆ. ಹೊಸ ವ್ಯವಸ್ಥೆಯು ಲಭ್ಯವಿರುವ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ” ಎಂದಿದ್ದಾರೆ.
“ಹಳೆಯ ಕಡತಗಳನ್ನು ಡಿಜಿಟಲೀಕರಣಗೊಳಿಸಲು ಪ್ರತ್ಯೇಕ ಉಪಕ್ರಮವನ್ನು ಕೈಗೊಳ್ಳುತ್ತೇವೆ. ಅಧಿಕಾರಿಗಳಿಗೆ ರಜೆಗಳು, ಬಡ್ತಿಗಳು, ಶಿಕ್ಷೆಗಳು ಮತ್ತು ವಿಚಾರಣೆಗಳಂತಹ ಆಡಳಿತಾತ್ಮಕ ವಿಷಯಗಳನ್ನು ದೂರದಿಂದಲೇ ತಿಳಿಯಲು ಡಿಜಿಟಲ್ ಮೋಡ್ ಸಹಾಯ ಮಾಡುತ್ತದೆ” ಎಂದು ದಯಾನಂದ ತಿಳಿಸಿದರು.