2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಮಾದಿಗ ಸಮುದಾಯದ ಒಬ್ಬರಿಗೂ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇದೀಗ, ನಿಗಮ/ಮಂಡಳಿಯಲ್ಲೂ ಸ್ಥಾನ ನೀಡದೇ ಸಮುದಾಯವನ್ನು ಕಡೆಗಣಿಸಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ ಆರೋಪಿಸಿದ್ದಾರೆ.
ಬೀದರ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಾದಿಗ ಸಮುದಾಯ ಮೊದಲಿನಿಂದಲೂ ಕಣ್ಮುಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬೆಂಬಲಿಸುತ್ತ ಬಂದಿದ್ದಾರೆ. ಆದರೆ, ಪಕ್ಷ ಎಲ್ಲದರಲ್ಲೂ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಲಿದೆ” ಎಂದು ದೂರಿದರು.
“ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಟ್ಟಿದೆ. ಆದರೆ, ಮಾದಿಗರನ್ನು ಕಡೆಗಣಿಸಿದೆ. ವಿಧಾನ ಪರಿಷತ್ ನಲ್ಲೂ ಅವಕಾಶ ಕಲ್ಪಿಸಲಿಲ್ಲ.ಕಾಂಗ್ರೇಸ್‌ಗೆ ಮಾದಿಗ ಸಮುದಾಯದ ಮತಗಳು ಬೇಕು. ಆದರೆ, ಪ್ರಾತಿನಿಧ್ಯ ನೀಡುವುದಿಲ್ಲ” ಎಂದರು.
“ಮಾದಿಗ ಸಮುದಾಯದಿಂದ ಈ ಹಿಂದೆ ಕಾಂಗ್ರೇಸ್ ಎಲ್.ಹನುಮಂತಯ್ಯ ಅವರಿಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಾರಿ ಅವರಿಗೆ ಉದ್ದೇಶಪೂರ್ವಕವಾಗಿಯೇ ಟಿಕೆಟ್ ತಪ್ಪಿಸಲಾಗಿದೆ. ಈ ರೀತಿ ಮಾದಿಗರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಉಪಾಧ್ಯಕ್ಷ ಕಮಲಾಕರ ಹೆಗಡೆ, ಕಾರ್ಯಾಧ್ಯಕ್ಷ ದತ್ತಾತ್ರಿ ಜ್ಯೋತಿ, ಪೀಟರ್ ಚಿಟಗುಪ್ಪ, ಸಂಘಟನಾ ಕಾರ್ಯದರ್ಶಿ ಜೈಶೀಲ್ ಕಲವಾಡೆ ಸೇರಿದಂತೆ ಪ್ರಮುಖರಾದ ವೀರಾಶೆಟ್ಟಿ, ರವಿ ಸೂರ್ಯವಂಶಿ, ಓಂಕಾರ ನೂರೆ, ದೀಪಕ್, ಲಾಲಪ್ಪ ನಿರ್ಣಾ, ದಯಾನಂದ ರೇಕುಳಗಿ ಇದ್ದರು.