ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಹಾಗೂ ಹನೂರು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ಜಿಲ್ಲಾಡಳಿತದಿಂದ ಇಂದು ಆತ್ಮೀಯ ಬೀಳ್ಕೊಡುಗೆ ನೀಡಿ, ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಯಳಂದೂರು ತಹಶೀಲ್ದಾರ್ ನಯನ, ಗುಂಡ್ಲುಪೇಟೆ ತಹಶೀಲ್ದಾರ್ ತನ್ಮಯ್ ಹಾಗೂ ಹನೂರು ತಹಶೀಲ್ದಾರ್ ಚೈತ್ರಾ ಅವರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ” ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಹಾಗೂ ಹನೂರು ತಹಶೀಲ್ದಾರ್ ಗುರುಪ್ರಸಾದ್ ಅವರು ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡುವುದರ ಜೊತೆಗೆ ಜಿಲ್ಲೆಯ ಜನರೊಂದಿಗೆ ಒಡನಾಟ ಹೊಂದಿದ್ದರು. ಅಧಿಕಾರಿಗಳು ಕಚೇರಿ ಕೆಲಸಗಳಲ್ಲಿ ಇತರರಿಗೆ ಮಾದರಿಯಾಗಬೇಕು. ಅಧಿಕಾರದಲ್ಲಿ ಉದ್ವೇಗಕ್ಕೆ ಒಳಗಾಗಬಾರದು. ಸಾರ್ವಜನಿಕರ ಸೇವೆಯೇ ನಮಗೆ ಸಿಕ್ಕಿರುವ ಭಾಗ್ಯವಾಗಿದೆ ” ಎಂದರು.
” ಚಾಮರಾಜನಗರ ತುಂಬಾ ವಿಶೇಷವಾದ ಜಿಲ್ಲೆಯಾಗಿದೆ. ಇಲ್ಲಿನ ಕಾರ್ಯನಿರ್ವಹಣೆ ಸವಾಲಾಗಿದ್ದರೂ ಹೃದಯಕ್ಕೆ ಹತ್ತಿರವಾದ ಜಿಲ್ಲೆಯಾಗಿದೆ. ಚೆಲುವ ಚಾಮರಾಜನಗರ, ಹಸಿರು ಚಾಮರಾಜನಗರದಂತೆಯೇ ಮುಂದಿನ ದಿನಗಳಲ್ಲಿ ಜಲಸಮೃದ್ಧಿ ಜಿಲ್ಲೆಗಾಗಿ ಎಲ್ಲರೂ ಸೇರಿ ಒಂದು ತಂಡವಾಗಿ ಕುಟುಂಬದ ಮಾದರಿಯಲ್ಲಿ ಕೆಲಸ ಮಾಡೋಣ. ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸೋಣ ” ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ” ಜಿಲ್ಲೆಯಲ್ಲಿ ಪ್ರೊಬೇಷನರಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವುದು ತೃಪ್ತಿ ತಂದಿದೆ. ಚಾಮರಾಜನಗರವನ್ನು ನನ್ನ ಸ್ವಂತ ಜಿಲ್ಲೆಯಾಗಿ ಭಾವಿಸಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡಿದ ಅನುಭವವಿದೆ. ಜಿಲ್ಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಜೀವನಪೂರ್ತಿ ಸ್ಮರಿಸಿಕೊಳ್ಳುವೆ ” ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ ಜವರೇಗೌಡ ಮಾತನಾಡಿ ‘ ವರ್ಗವಣೆ ಎನ್ನುವುದು ಸಹಜ ಪ್ರಕ್ರಿಯೆಯಾಗಿದೆ. ಒಂದೊಂದು ಜಿಲ್ಲೆಯಲ್ಲಿಯೂ ವಿಭಿನ್ನ ಸವಾಲುಗಳಿರುತ್ತವೆ. ಅವುಗಳನ್ನು ಸೂಕ್ತವಾಗಿ ನಿಭಾಯಿಸುವ ಗುರಿ ಇರಬೇಕು. ಆಡಳಿತ ನಿರ್ವಹಣೆಗೆ ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಸಹಕಾರ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಸಲಹೆ, ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡುವುದರ ಮೂಲಕ ಜಿಲ್ಲೆಯನ್ನು ಪ್ರಗತಿಯತ್ತ ಮುನ್ನೆಡೆಸೋಣ ‘ ಎಂದರು.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಅಂಗನವಾಡಿ ಕೇಂದ್ರಗಳ ಪುನಶ್ಚೇತನ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ವಿಭಾಗಾಧಿಕಾರಿ ಬಿ. ಆರ್. ಮಹೇಶ್, ಕೊಳ್ಳೇಗಾಲ ತಹಶೀಲ್ದಾರ್ ಬಸವರಾಜು, ನಿರ್ಗಮಿತ ತಹಶೀಲ್ದಾರ್ ರಮೇಶ್ ಬಾಬು, ಗುರುಪ್ರಸಾದ್, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಯೋಗಾನಂದ, ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಉಲ್ಲಾಸ್, ತಾಲೂಕು ಅಧ್ಯಕ್ಷ ಶ್ರೀಧರ್, ರೈತ ಮುಖಂಡ ಹಳ್ಳಿಕೆರೆ ಭಾಗ್ಯರಾಜ್ ಸೇರಿದಂತೆ ಇನ್ನಿತರರು ಇದ್ದರು.