ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸುವುದು, ನಿರಂತರ ಸಭೆ, ಪ್ರಗತಿ ಪರಿಶೀಲನೆ, ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿದ್ದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಂಗಳವಾರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ಪಾಠ ಮಾಡಿ ಗಮನ ಸೆಳೆದರು.
ಮಾರ್ಚ್ 21 ರಿಂದ ಜರುಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸದ್ಯದ ಶೈಕ್ಷಣಿಕ ಚಟುವಟಿಕೆಯನ್ನು ವೀಕ್ಷಿಸಲು ನಗರದ ನೌಬಾದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳ ಅಭ್ಯಾಸ ಕ್ರಮವನ್ನು ಪರಿಶೀಲಿಸಿದರು.
ವಿದ್ಯಾರ್ಥಿಗಳೊಂದಿಗೆ ಗಣಿತ ವಿಷಯ ಕುರಿತು ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಈವರೆಗೆ ಕಲಿತ ಗಣಿತ ಪ್ರಶ್ನೆಗಳನ್ನು ಬಿಡಿಸುವಂತೆ ಮಕ್ಕಳಿಗೆ ಹೇಳಿದರು. ವಿದ್ಯಾರ್ಥಿಗಳು ಕೆಲವು ಪ್ರಶ್ನೆಗಳನ್ನು ಸರಾಗವಾಗಿ ಬಿಡಿಸಿದರು. ನಂತರ ಖುದ್ದು ಅವರೇ ಮಕ್ಕಳಿಗೆ ಗಣಿತ ಪಠ್ಯಕ್ರಮದ ಪಾಠ ಬೋಧಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ತರಬೇತಿ ಹಾಗೂ ವಾರಕ್ಕೊಮ್ಮೆ ನಿರಂತರ ಪರೀಕ್ಷೆ ಕೈಗೊಳ್ಳುವಂತೆ ಬೀದರ ತಾಲ್ಲೂಕು ಬಿಇಓ ಟಿ.ಆರ್.ದೊಡ್ಡೆ ಅವರಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ : ಹೆತ್ತವರಿಗೆ ಸೆಲ್ಯೂಟ್ ಹೊಡೆದು ಗೌರವಿಸಿದ ಮಗ
ಡಿಸೆಂಬರ್ ತಿಂಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣಗೊಂಡಿದ್ದು, ಉಳಿದ ಮೂರು ತಿಂಗಳಲ್ಲಿ ಪಠ್ಯಕ್ರಮ ಪುನರಾವರ್ತನೆ ಹಾಗೂ ಪಾಸಿಂಗ್ ಪ್ಯಾಕೇಜ್ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ನಿರಂತರವಾಗಿ ಬೋಧಿಸಲಾಗುತ್ತಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಬೀದರ ತಾಲ್ಲೂಕು ಬಿಇಓ ಟಿ.ಆರ್.ದೊಡ್ಡೆ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.