ಕಳೆದ ಮೂರು ವರ್ಷಗಳಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣಕ್ಕೆ ಸಿಬ್ಬಂದಿ ಕತ್ತಲೆಯಲ್ಲೇ ಕುಳಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಬೀದರ್ ನಗರದ ಮೈಲೂರು ಸಮೀಪದ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿರುವ ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಕಚೇರಿಯೊಳಗಿನ ಕೊಠಡಿ, ಆವರಣದ ಗೋಡೆ, ಮೇಜು, ಕುರ್ಚಿಗಳು ಧೂಳು ಕುಡಿಯುತ್ತಿವೆ. ಅಲ್ಲಲ್ಲಿ ಸಂಗ್ರಹವಾದ ಕಸದ ರಾಶಿ, ಮಳೆ ನೀರು ನೋಡಿದರೆ ಕಚೇರಿಗಿರುವ ಯಾವ ಲಕ್ಷಣವೂ ಕಾಣಿಸುವುದಿಲ್ಲ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಅದನ್ನು ಸರಿಪಡಿಸುವ ಕೆಲಸವೂ ನಡೆಯದಿರುವುದು ವಿಪರ್ಯಾಸವೇ ಸರಿ.
ಕಚೇರಿಯೊಳಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಸೂರ್ಯನ ಬೆಳಕು ಕಚೇರಿಗೆ ಉಸಿರು ಎಂಬಂತಾಗಿದೆ. ಕಚೇರಿಯಲ್ಲಿ ಕಂಪ್ಯೂಟರ್, ಫ್ಯಾನ್ ಸೇರಿದಂತೆ ಇತರೆ ವ್ಯವಸ್ಥೆ ಇದ್ದರೂ ವಿದ್ಯುತ್ ಸಮಸ್ಯೆಯಿಂದ ಎಲ್ಲವೂ ಮೂಲೆ ಸೇರಿವೆ. ಹೀಗಾಗಿ ಕಚೇರಿಯ ಎಲ್ಲ ಕೆಲಸ ಕಾರ್ಯಗಳಿಗೆ ಇಲ್ಲಿನ ಸಿಬ್ಬಂದಿ ಖಾಸಗಿ ಇಂಟರ್ನೆಟ್ ಕೇಂದ್ರಗಳಿಗೆ ನಿತ್ಯ ಅಲೆದಾಡಬೇಕಾದ ಪರಿಸ್ಥಿತಿ ಇದೆ.
2024ರ ಜನವರಿಯಿಂದ ರಾಜ್ಯ ಸರ್ಕಾರವು ‘ಯುವನಿಧಿ’ ಯೋಜನೆ ಆರಂಭಿಸಿದ್ದು, ಪದವಿ ಹಾಗೂ ಡಿಪ್ಲೊಮಾ ಪೂರೈಸಿದವರ ನೋಂದಣಿ ಕಾರ್ಯ ಈ ಕಚೇರಿಯಿಂದಲೇ ನಡೆಯುತ್ತಿದೆ. ಹೀಗಾಗಿ ʼಯುವನಿಧಿʼ ನೋಂದಣಿ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ವಿದ್ಯಾರ್ಥಿಗಳು, ಸಾರ್ವಜನಿಕರು ಕಚೇರಿಗೆ ಆಗಮಿಸುತ್ತಿದ್ದಾರೆ. ಆದರೆ ಕಚೇರಿಗೆ ಬರುವ ಜನರಿಗೆ ಕನಿಷ್ಠ ಮೂಲ ಸೌಕರ್ಯ ಎಂಬುದು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ.

ಕಚೇರಿಯಲ್ಲಿ ಒಟ್ಟು ಆರು ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಅದರಲ್ಲಿ ಓರ್ವ ಮಹಿಳಾ ಸಿಬ್ಬಂದಿ ಸಹ ಇದ್ದಾರೆ. ಆದರೆ, ಸಿಬ್ಬಂದಿಗೆ ಅಗತ್ಯವಾದ ಮೂಲ ಸೌಕರ್ಯ ಕಚೇರಿಯೊಳಗೆ ಇಲ್ಲ. ಕೋಣೆಯಲ್ಲಿ ಬೆಳಕು ಇಲ್ಲದಿರುವುದಕ್ಕೆ ಸಿಬ್ಬಂದಿ ಕಚೇರಿಯ ವರಾಂಡ ಅಥವಾ ಹೊರಗಡೆ ಆವರಣದಲ್ಲಿ ಕುಳಿತು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಕುಡಿಯುವ ನೀರು ಸಿಬ್ಬಂದಿಯೇ ಖರೀದಿ ತರಬೇಕು. ಸಿಬ್ಬಂದಿ ಶೌಚಾಯಲಕ್ಕೆ ಬಯಲೇ ಗತಿ ಎಂಬಂತಾಗಿದೆ ಎಂದು ಸಿಬ್ಬಂದಿ ಗೋಳು ತೋಡಿಕೊಳ್ಳುತ್ತಾರೆ.
ಈ ಹಿಂದೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಚೇರಿಯೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿತ್ತು. ಇದೀಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪಕ್ಕದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಆದರೆ ಮೂರು ವರ್ಷ ಕಳೆದರೂ ಕಚೇರಿಗೆ ಕನಿಷ್ಠ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ʼಸರ್ಕಾರಿ ಕಚೇರಿಗಳ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಇರುವ ಆಸಕ್ತಿ ಬಳಕೆ ಮಾಡಿಕೊಳ್ಳಲು ಹಾಗೂ ನಿರ್ವಹಣೆ ಮಾಡಲು ಇರುವುದಿಲ್ಲ ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿರುವ ಕಟ್ಟಡಗಳು ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗಿ ಸಾರ್ವಜನಿಕರ ತೆರಿಗೆ ಹಣ ನೀರುಪಾಲಾಗುತ್ತದೆ ಎಂಬುದಕ್ಕೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯೇ ತಾಜಾ ಉದಾಹರಣೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಚೇರಿಯ ಮುಖ್ಯಸ್ಥ ಅಧಿಕಾರಿಗಳು ಕಚೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಬೇಕುʼ ಎಂದು ಭೀಮ ಆರ್ಮಿ ಸಂಘಟನೆ ಮುಖಂಡ ಘಾಳೆಪ್ಪಾ ಲಾಧಾಕರ್ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಜೆಸ್ಕಾಂ ಇಇ ರಮೇಶ ಪಾಟೀಲ್ ಈದಿನ.ಕಾಮ್ ಜೊತೆಗೆ ಮಾತನಾಡಿ, ʼಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೇಬಲ್ ಕಟ್ ಆಗಿದೆ, ಸ್ಥಳಕ್ಕೆ ನಾವು ಭೇಟಿ ನೀಡಿ ಪರಿಶೀಲಿಸಿದ್ದೇವೆ. ಹೊಸ ತಂತಿ ಖರೀದಿಸಿ ಕೊಡಿ ನಾವು ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆಂದು ಕಚೇರಿ ಅಧಿಕಾರಿಗಳಿಗೆ ತಿಳಿಸಲಾಗಿದೆʼ ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.