‘ಹೆಬ್ಬುಲಿ’ ಸಿನಿಮಾದಲ್ಲಿ ನಟ ಸುದೀಪ್ ಕೇಶ ವಿನ್ಯಾಸ ಮಾಡಿದ್ದ ಶೈಲಿಯಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ಕ್ಷೌರ ಮಾಡಬೇಡಿ ಎಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಸಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಪತ್ರ ಬರೆದಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಸುದೀಪ್ ಅವರ ‘ಹೆಬ್ಬುಲಿ’ ಸಿನಿಮಾ ರೀತಿಯಲ್ಲಿ ಕ್ಷೌರ ಮಾಡಿಸಿಕೊಂಡಿರುವುದನ್ನು ಬೇಸರಗೊಂಡು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
“ನಮ್ಮ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ಹೆಬ್ಬುಲಿ ಸಿನಿಮಾ ನಟನ ಶೈಲಿಯಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ. ಅವರ ‘ಫ್ಯಾಶನ್’ ಪ್ರಜ್ಞೆಯು ಅವರ ಪಠ್ಯಕ್ರಮದ ಆಸಕ್ತಿಯನ್ನು ಮರೆಮಾಚಿದೆ. ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ವಿದ್ಯಾರ್ಥಿಗಳಿಗೆ ಶಿಸ್ತನ್ನು ಪ್ರದರ್ಶಿಸುವ ರೀತಿಯಲ್ಲಿ ಕ್ಷೌರ ಮಾಡಬೇಕು” ಎಂದು ಪತ್ರದಲ್ಲಿ ಅವರು ವಿನಂತಿಸಿದ್ದಾರೆ.
ಅವರು ಬರೆದಿರುವ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರು ಮತ್ತು ಶಿಕ್ಷಣ ತಜ್ಞರು ಪತ್ರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಪತ್ರವನ್ನು ಸಲೂನ್ ಮಾಲೀಕರೂ ಸ್ವಾಗತಿಸಿದ್ದು, ಸಲೂನ್ ಮಾಲೀಕ ಚನ್ನಪ್ಪ ಸಿದ್ದರಾಮಪ್ಪ ಅವರು ಮಕ್ಕಳಿಗೆ ವಿವಿಧ ಶೈಲಿಯಲ್ಲಿ ಕ್ಷೌರ ಮಾಡುವುದನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ.