ಮನೆಗೆ ತೆರಳಲು ಆಟೊ ಹತ್ತಿದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಿನ್ನದ ಸರ ದೋಚಿದ್ದ ಆಟೊ ಚಾಲಕ ಮತ್ತು ಆತನ ಪ್ರೇಯಸಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಹನಿಯೂರ ನಿವಾಸಿ ಆಟೊ ಚಾಲಕ ರಘು ಮತ್ತು ಚೆಲ್ಲಹಳ್ಳಿ ಶ್ವೇತಾ ಬಂಧಿತರು.
“ತೂಬಗೆರೆ ಪೇಟೆಯ ಯಶೋಧಮ್ಮ ಎಂಬುವವರು ಕೊಂಗಾಡಿಯಪ್ಪ ಕಾಲೇಜು ಬಳಿಯಿರುವ ಮಗಳ ಮನೆಯಿಂದ ಬರಲು ಆಟೊ ಹತ್ತಿದ್ದಾರೆ. ಆಟೊದಲ್ಲಿ ಚಾಲಕನೊಂದಿಗೆ ಓಂ ಶಕ್ತಿ ಮಾಲಾಧಾರಿ ಮಹಿಳೆಯು ಕುಳಿತಿದ್ದು, ಅವರನ್ನು ಆಲಹಳ್ಳಿ ಸಮೀಪ ಬಿಟ್ಟು ನಂತರ ಮನೆಗೆ ಬಿಡುವುದಾಗಿ ಚಾಲಕ ಕರೆದೊಯ್ದಿದ್ದ. ಆದರೆ, ಆಟೊ ಚಾಲಕ ನಾಗಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ 648 ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯಶೋಧಮ್ಮನವರ 33 ಗ್ರಾಂ ಮಾಂಗಲ್ಯ ಸರ ಹಾಗೂ 4 ಗ್ರಾಂ ಓಲೆ ದೋಚಿದ್ದು, ಬಳಿಕ ಅವರನ್ನು ಆಲಹಳ್ಳಿ ಸಮೀಪ ಬಿಟ್ಟು ಪರಾರಿಯಾಗಿದ್ದ” ಎಂದು ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ದೂರು ಸ್ವೀಕರಿಸಲು ಪೊಲೀಸರ ನಿರಾಕರಣೆ; ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಆಸ್ಪತ್ರೆಗೆ ದಾಖಲು
“ಈ ಕುರಿತು ಯಶೋಧಮ್ಮ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಚಾಲಕ ರಘು ಮತ್ತು ಶ್ವೇತಾ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೋಚಿದ್ದ ಮಾಂಗಲ್ಯ ಸರವನ್ನು ಅಡವಿಟ್ಟಿದ್ದು, ಮರು ವಸೂಲಿ ಮಾಡಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.