ಕೃಷಿ ಹೊಂಡಕ್ಕೆ ಬಿದ್ದ ಬಾಲಕನ ಪ್ರಾಣ ರಕ್ಷಣೆ ಮಾಡಿದರೂ, ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಬುಧವಾರ ನಡೆದಿದೆ.
8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಜೀವದ ಹಂಗು ತೊರೆದು ಮೇಸ್ತ್ರಿಯೊಬ್ಬರು ಬಾಲಕನನ್ನು ರಕ್ಷಣೆ ಮಾಡಿದ ಬಳಿಕ ಆತನನ್ನು ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೂ ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆ ಸಿಗದ ಕಾರಣ ಹಾಗೂ ಅಲ್ಲಿಂದ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಬಾಲಕ ಸಾವನ್ನಪ್ಪಿದ್ದಾನೆಂದು ಬಾಲಕನ ತಂದೆ ಹಾಗೂ ಮೇಸ್ತ್ರಿ ಸೇರಿದಂತೆ ಸ್ಥಳೀಯರು ಆರೋಪಿಸಿದ್ದಾರೆ.
ಮೃತ ಬಾಲಕನ ತಂದೆ ತಾಯಿ ಆಂಧ್ರಪ್ರದೇಶದ ಪೆನಗೊಂಡ ಬಳಿಯ ಮುದ್ದೆಪಲ್ಲಿ ಗ್ರಾಮದವರು. ಕಳೆದ ಭಾನುವಾರ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಕೂಲಿಯಾಳುಗಳಾಗಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು. ಜೊತೆಯಲ್ಲಿ ಮಕ್ಕಳನ್ನು ಕರೆದುಕೊಂಡು ಬಂದಿದ್ದು, ಇಂದು ಕೊನಘಟ್ಟ ಗ್ರಾಮದಲ್ಲಿ ಮನೆ ನಿರ್ಮಾಣ ಕೆಲಸಕ್ಕೆ ಮುಂದಾಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.
ಕಟ್ಟಡ ಕೆಲಸ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ರೈತರೊಬ್ಬರಿಗೆ ಸೇರಿದ ಕೃಷಿ ತೋಟವಿದೆ. ಮೃತ ಬಾಲಕ ತನ್ನ ತಂಗಿ ಜೊತೆ ಶೌಚ ಕಾರ್ಯಕ್ಕೆಂದು ತೋಟಕ್ಕೆ ತೆರಳಿದ್ದಾಗ, ಬಾಲಕ ನಾಗಚೈತನ್ಯ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಆತನ ತಂಗಿ ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದಲ್ಲಿಗೆ ಬಂದು ಸುದ್ದಿ ತಿಳಿಸಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪೌರಕಾರ್ಮಿಕನ ಮೇಲೆ ಹಲ್ಲೆ: ಮುನ್ಸಿಪಲ್ ಕಾರ್ಮಿಕರ ಸಂಘ ಪ್ರತಿಭಟನೆ
ಮೃತ ಬಾಲಕನ ತಾಯಿ ಚೀರಾಡುತ್ತಿದ್ದುದನ್ನು ಗಮನಿಸಿದ ಮೇಸ್ತ್ರಿ ತಮ್ಮಯ್ಯ ಎಂಬುವರು, ಕೃಷಿ ಹೊಂಡದ ಬಳಿ ಬಂದಿದ್ದಾರೆ. ಕೃಷಿ ಹೊಂಡಕ್ಕೆ ಧುಮಿಕಿ ಬಾಲಕನ ಪ್ರಾಣ ಕಾಪಾಡಿದ್ದಾರೆ. ತಕ್ಷಣವೇ ಬಾಲಕನನ್ನು ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲವೆಂದು ಹೇಳಿ ಅಲ್ಲಿನ ಸಿಬ್ಬಂದಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಆಸ್ಪತ್ರೆಗೆ ಬಂದಾಗ ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.