ಸಾಲದ ಸುಳಿಗೆ ಸಿಲುಕಿ ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಂದಿ ಮೋರಿ ಬಳಿ ಇಂದು ಬೆಳಿಗ್ಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ತಾಲೂಕಿನ ಕೊನಘಟ್ಟ ಗ್ರಾಮದ ರಕ್ಷಿತ್ ಬಾಬು(26) ಎಂದು ಗುರುತಿಸಲಾಗಿದೆ.
ಮೃತ ಯುವಕ ಫುಡ್ ಡೆಲಿವೆರಿ ಕೆಲಸ ಮಾಡುತ್ತಿದ್ದ, ಮಾರಸಂದ್ರದ ಫೈವ್ ಸ್ಟಾರ್, ಸ್ವಿಗ್ಗಿ ಸೇರಿದಂತೆ ಹಲವು ಕಂಪನಿಗಳ ಡೆಲಿವರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೇಲೂರು | ಪವಿತ್ರ ರಂಝಾನ್ ಆಚರಣೆ; ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ
ಒಂದೂವರೆ ತಿಂಗಳ ಹಿಂದೆ ಮೃತ ಯುವಕನ ತಾಯಿ ಕೊನಘಟ್ಟ ಗ್ರಾಮದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾಲದ ಸುಳಿಯಲ್ಲಿ ಕುಟುಂಬ ಸಿಲುಕಿತ್ತು. ಸಾಲ ಕೊಟ್ಟವರು ಮನೆಯ ಬಳಿ ಬಂದು ಗಲಾಟೆ ಮಾಡಿದ್ದರೆಂಬ ಕಾರಣಕ್ಕೆ ಸಾವನ್ನಪ್ಪಿದ್ದರೆಂದು ಹೇಳಲಾಗಿತ್ತು. ಇಂದು ಬೆಳಿಗ್ಗೆ ಮಗನೂ ಕೂಡ ಸಾವಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ಹಿಂದಿನ ಅಸಲಿ ಕಾರಣವನ್ನು ಪೊಲೀಸರು ಬೆನ್ನಟ್ಟಿದ್ದಾರೆ.
